ಗ್ರಾಮೀಣ ಭಾಗದಲ್ಲಿ ಶೇಕಡ 75% ರಿಂದ 80% ರಷ್ಟು ದಾಖಲೆ ಮತದಾನ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮೆ11. ಸಿರುಗುಪ್ಪ ತಾಲೂಕಿನ ಗ್ರಾಮೀಣ ಭಾಗದಲ್ಲಿ 2023 ರ ಈ ವಿಧಾನಸಭಾ ಚುನಾವಣೆಯಲ್ಲಿ ಶೇಕಡ 75% ರಿಂದ 80% ರಷ್ಟು ದಾಖಲೆ ಮತದಾನ ನಡೆದಿದೆ. ಲೋಕಸಭೆ ಮತ್ತು ವಿಧಾನಸಭೆಗೆ ಇಲ್ಲಿಯವರೆಗೆ ಮಾಮೂಲಿನಂತೆ ಶೇಕಡ 50 ರಿಂದ 60 ರಷ್ಟು ಮಾತ್ರ ಮತದಾನ ನಡೆಯುತ್ತಿತ್ತು. ಆದರೆ ಈ ಭಾರಿ ಕೆಲ ಗ್ರಾಮಗಳಲ್ಲಿ ಶೇಕಡ 85 ರಿಂದ 90 ರಷ್ಟು ದಾಖಲೆ ಮತದಾನ ನಡೆದಿದೆ. ಸಿರಿಗೇರಿ ಹೋಬಳಿಯಲ್ಲಿ ನಿನ್ನೆ ಶೇಕಡ 80% ಮತದಾನ ದಾಖಲಾಗಿದೆ. 9592 ಒಟ್ಟು ಮತಗಳಲ್ಲಿ 11 ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳು 7483. ಶೇಕಡ 70ರ ಗುರಿ ತಲುಪಲು ಚುನಾವಣೆ ಜವಾಬ್ದಾರಿ ಹೊತ್ತ ಅಧಿಕಾರಿಗಳಿಗೆ ಈ ಮತದಾನವು ಖುಷಿ ತಂದಿದೆ.
ಮತದಾನಕ್ಕೆ ತೊಂದರೆ: ಗ್ರಾಮದ 11 ಮತಗಟ್ಟೆಗಳ ಪೈಕಿ 10 ಮತಗಟ್ಟೆಗಳಲ್ಲಿ ಸಂಜೆ 5ಗಂಟೆ ಹೊತ್ತಿಗೆ ಮತದಾನ ಸ್ಥಗಿತಗೊಂಡು, ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ತೆರೆಯಲಾಗಿದ್ದ 138ರ ಮತಕೇಂದ್ರದಲ್ಲಿ 2ಕ್ಷೇತ್ರಗಳ ಒಟ್ಟು 1435 ಮತಗಳ ಹೆಚ್ಚು ಜನಸಂದಣಿಗೆ ಒಂದೆ ಮತಗಟ್ಟೆ ವ್ಯವಸ್ಥೆ ಮಾಡಿದ್ದರಿಂದ ಸರಾಗ ಮತದಾನಕ್ಕೆ ತೊಂದರೆಯಾಗಿತ್ತು. ತಾಸುಗಳವರೆಗೆ ಸಾಲಿನಲ್ಲಿ ನಿಲ್ಲುವುದು ನೂಕು ನುಗ್ಗಲಿಗೆ ಕಾರಣವಾಗಿ, ಮಹಿಳೆಯರು, ಮಕ್ಕಳ ತಾಯಂದಿರು, ಚುನಾವಣೆ ನಿರ್ವಹಣೆಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಕೊನೆಗೆ 6ಗಂಟೆಯ ಹೊತ್ತಿಗೆ ಕಾಂಪೌಂಡಿನಲ್ಲಿ ಎಷ್ಟು ಮತದಾರರು ಜಮಾಯಿಸಿದರೂ. ರಾತ್ರಿವರೆಗೂ ಮತ ಹಾಕಿಸಲಾಗುವುದೆಂದು ಹೇಳಿ ಬಿಗು ವಾತಾವರಣವನ್ನು ಅಧಿಕಾರಿಗಳು ತಿಳಿಗೊಳಿಸಿದರು. ಸ್ವತಹ ತಹಶೀಲ್ದಾರ್ ಮಂಜುನಾಥಸ್ವಾಮಿ ಇವರು ಸಾಲಿನಲ್ಲಿದ್ದವರಿಗೆ (ಟೋಕನ್) ಹಂಚಿಕೆ ಮಾಡಿ 7ಗಂಟೆವರೆಗೂ ಮತ ಚಲಾವಣೆಗೆ ವ್ಯವಸ್ಥೆ ಮಾಡಿದರು. ಮುಂದಿನ ಬಾರಿ ಇದನ್ನು 2 ಮತಗಟ್ಟೆಗಳಾಗಿ ವ್ಯವಸ್ಥೆ ಮಾಡಬೇಕೆಂದು ಇದೇವೇಳೆ ಮುಖಂಡರು, ಮಹಿಳೆಯರು ಒತ್ತಾಯಿಸಿದರು.