ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ.19. ಮಣ್ಣೆತ್ತಿನ ಅಮವಾಸ್ಯೆಯ ಹಬ್ಬದ ಸಂಬ್ರಮ ಸಡಗರ ಗ್ರಾಮೀಣ ಭಾಗದಲ್ಲಿ ನಿನ್ನೆ ಜೂ.18ರಂದು ಕಂಡುಬಂತು. ಕಾರಹುಣ್ಣಿವೆಯ ನಂತರ ರೈತಾಪಿ ವರ್ಗದವರು ಮಣ್ಣೆತ್ತಿನ ಅಮವಾಸ್ಯೆಯನ್ನು ಕಾರಹುಣ್ಣಿಮೆಯಷ್ಟೇ ಸಂಬ್ರಮದಿಂದ ಆಚರಿಸುವುದು ಗ್ರಾಮೀಣ ಭಾಗದಲ್ಲಿ ಹಿಂದಿನ ಕಾಲದಿಂದಲೂ ಪ್ರತೀತಿಯ ಹಬ್ಬವಾಗಿದೆ. ಕಾರಹುಣ್ಣಿವೆಯಲ್ಲಿ ದೊಡ್ಡವರು ಎತ್ತುಗಳನ್ನು ಓಡಿಸುವಂತೆ, ಅದೇ ಮಾದರಿಯಲ್ಲಿ ಚಿಕ್ಕ ಮಕ್ಕಳು ಎರೆ ಮಣ್ಣಿನಿಂದ ತಯಾರಿಸಿದ ಮಣ್ಣೆತ್ತುಗಳನ್ನು ತಂದು ಕೋಡುಗಳಿಗೆ ಬಣ್ಣಹಚ್ಚಿ ಸಿಂಗರಿಸಿ, ಆ ಮಣ್ಣಿನ ಎತ್ತನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ತಾವೇ ಎತ್ತುಗಳೇನೋ ಎನ್ನುವಷ್ಟು ಹುಮ್ಮಸ್ಸಿನಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಮ್ಮ ಓರಗೆಯ ಸ್ನೇಹಿತರೊಂದಿಗೆ ಓಡುವುದು. ಓಟದಲ್ಲಿ ಪ್ರಥಮ ಸ್ಥಾನಕ್ಕೆ ಬಂದವರ ಮಣ್ಣೆತ್ತುಗಳನ್ನು ನಂತರ ತಾವೇ ತಯಾರಿಸಿದ ಕಟ್ಟಿಗೆಯ, ಹಲಗೆಯ ಬಂಡಿಯಲ್ಲಿ ಇಟ್ಟು ತಪ್ಪಡಿ ಹೊಡೆದುಕೊಂಡು ಮೆರವಣಿಗೆ ಮಾಡಿ ಗ್ರಾಮದ ಹೊರಗಿನ ಎದುರು ಬಸವಣ್ಣ ಅಥವಾ ಗ್ರಾಮದ ಬಸವಣ್ಣನ ದೇವಸ್ಥಾನಕ್ಕೆ ಹೋಗಿಬರುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಮಕ್ಕಳಿಗೆ ಸಂಬ್ರಮವನ್ನು ಇಮ್ಮಡಿಗೊಳಿಸಲು ಮನೆಯಲ್ಲಿ ದೊಡ್ಡವರು ಸಿಹಿ ಪದಾರ್ಥ ತಯಾರಿಸಿ ದೇವರ ಜಗಲಿಯಲ್ಲಿ ಮಣ್ಣೆತ್ತುಗಳನ್ನು ಇಟ್ಟು ಯಾವಗಲೂ ಎತ್ತುಗಳನ್ನು ತಯಾರಿಸುವಂತೆ ಮಣ್ಣು ಹಸಿಯಾಗಿರುವಂತೆ ಮಳೆಯನ್ನು ತರಿಸು ಬಸವಣ್ಣಾ ಎಂದು ಪೂಜೆ ಮಾಡಿ ಮಕ್ಕಳಿಗೆ ಕರಿ ಹರಿಯುವ ಓಟಕ್ಕೆ ಮಣ್ಣೆತ್ತುಗಳನ್ನು ಕೊಡುತ್ತಾರೆ. ಕೆಲವರು ಮನೆಯಲ್ಲಿ ಮಣ್ಣಿನಿಂದ ಮಾಡಿದ ದೊಡ್ಡ ಬಸವಣ್ಣನ (ಎತ್ತು) ನ್ನು ಇಟ್ಟು ಪೂಜೆ ನಡೆಸುತ್ತಾರೆ. ಇದು ಗ್ರಾಮೀಣ ಭಾಗದಲ್ಲಿ ಮಣ್ಣೆತ್ತಿನ ಅಮವಾಸ್ಯೆಯನ್ನು ಹಬ್ಬವಾಗಿ ಆಚರಿಸಿಕೊಂಡು ಬಂದಿರುವ ಪ್ರತೀತಿಯಾಗಿದೆ.
One attachment • Scanned by Gmail