ಗ್ರಾಮೀಣ ಭಾಗದಲ್ಲಿ ನಾಗರ ಅಮವಾಸ್ಯೆ ಚೌತಿಯ ಸಂಬ್ರಮ”


ಸಿರಿಗೇರಿ ಆ1. ಗ್ರಾಮೀಣ ಭಾಗದ ಜನರಿಗೆ ಹಬ್ಬಗಳ ಸಾಲನ್ನು ಹೊತ್ತು ತರುವ ಶ್ರಾವಣ ಮಾಸದ ನಾಗರ ಅಮವಾಸ್ಯೆ ಕಳೆದು ಮೊದಲನೇ ಸೋಮವಾರದ ಚೌತಿಯ ದಿನವಾದ ಇಂದು ಎಲ್ಲಡೆ ನಾಗಪ್ಪನಿಗೆ ಹಾಲು ಹಾಕುವ ಸಂಬ್ರಮ ನಡೆಯಿತು. ಮಳೆಯ ಏರಿಳಿತಗಳ ಮದ್ಯೆ ಕೃಷಿ ಚಟುವಟಿಕೆಗಳ ನಾನಾ ಕೆಲಸಗಳಲ್ಲಿ ತೊಡಗಿರುವ ರೈತಾಪಿ ವರ್ಗದವರು ಮೊದಲ ಶ್ರಾವಣಸೋಮವಾರದ ಹಬ್ಬದ ಸಂಬ್ರಮದಲ್ಲಿ ತೊಡಗಿದ್ದರು. ಕೆಲವರು ಬೆಳಗಿನ ಜಾವದಲ್ಲಿಯೇ ನಾಗಪ್ಪನಿಗೆ ಹಾಲು ಹಾಕಿ ತಮ್ಮತಮ್ಮ ಕೆಲಸಕ್ಕೆ ಜಮೀನುಗಳಿಗೆ ತೆರಳುವುದು ಕಂಡುಬಂತು. ಹಿಂದಿನ ದಿನ ರಾತ್ರಿಯಿಂದಲೇ ಚೌತಿಗೆ ಹಾಲೆರೆಯುವ ಪೂಜೆ ಕಾರ್ಯಕ್ರಮದ ಅಂಗವಾಗಿ ನೆಲಗಡಲೆ, ಉರಿಕಡಲೆ, ಎಳ್ಳು, ಸಜ್ಜೆ, ಅಕ್ಕಿ ಮತ್ತು ರವೆಗಳಿಂದ ಬಗೆಬಗೆಯ ಉಂಡಿಗಳನ್ನು ತಯಾರಿಸಿ ಬೆಳಗಿನಜಾವದಲ್ಲಿ ಸ್ನಾನ ಮುಗಿಸಿ ಹೊಸಬಟ್ಟೆಯುಟ್ಟು ಕುಟುಂಬದವರು ಕೂಡಿಕೊಂಡು ತಮ್ಮ ತಮ್ಮ ಓಣಿಗಳಲ್ಲಿನ ನಾಗಪ್ಪನ ಮೂರ್ತಿಗಳಿಗೆ ಬತ್ತಿಯ ಹಾರ ಹಾಕಿ ಹಾಲೆರೆದು ಭಕ್ತಿ ಸಮರ್ಪಿಸಿದರು.
ನವ ದಂಪತಿಗಳಿಂದ ವಿಶೇಷ ಪೂಜೆ: ಕಳೆದ ತಿಂಗಳ ಮದುವೆ ಮಹೂರ್ತಗಳಲ್ಲಿ ಮದುವೆಯಾಗಿದ್ದ ಗ್ರಾಮೀಣ ಭಾಗದ ಸಾವಿರಾರು ಹೊಸ ಯುವ ದಂಪತಿಗಳು ಶ್ರದ್ಧೆ ಭಕ್ತಿಯಿಂದ ನಾಗಪ್ಪನಿಗೆ ಹಾಲೆರದು ಭಕ್ತಿ ಸಮರ್ಪಿಸಿ ಸಂಪ್ರದಾಯ ಪಾಲಿಸಿದರು. ಆಷಾಡ ಕಳೆದು ಶ್ರಾವಣಮಾಸದಲ್ಲಿ ಮದುವೆಯಾದ ಹೊಸ ಸೊಸೆಯಂದಿರು ತಮ್ಮ ತಮ್ಮ ಗಂಡನ ಮನೆಗೆ ಬಂದು ಹಾಲು ಹಾಕುವ ಹಬ್ಬವನ್ನು ಆಚರಿಸಿದರು. ಶ್ರಾವಣಮಾಸದ ತಿಂಗಳು ಪೂರ್ತಿ ನಾಗರನಿಗೆ ಹಾಲೆರೆಯುವ ಸಂಪ್ರದಾಯವನ್ನು ಮೊದಲ ಸೋಮವಾರದಿಂದ ಪ್ರಾರಂಭಿಸಿ ಕಡೇ ಸೋಮವಾರದವರೆಗೂ, ಕೆಲ ಸಮುದಾಯದವರು ಶನಿವಾರ, ಗುರುವಾರದ ದಿನಗಳಲ್ಲಿ ಹಾಲು ಹಾಕುತ್ತಾರೆ. ಈ ಮದ್ಯೆಯೇ ಗ್ರಾಮೀಣ ಭಾಗದ ಗ್ರಾಮ ದೇವರುಗಳು ಹೊಳೆಗೆ ಹೋಗಿ ತನುಬಿಂದಿಗೆ ಹೊತ್ತು ತರುವ ಶುಭಕಾರ್ಯಗಳಿಗೂ ಚಾಲನೆ ನೀಡಿ ಶ್ರಾವಣವು ಸಂಪ್ರದಾಯಗಳ ಪಾಲನೆಗೆ ವೇದಿಕೆಯಾಗಲಿದೆ. ಸಿರಿಗೇರಿಯ ಎಲ್ಲಾ ಪ್ರಮುಖ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ ನಾಗಪ್ಪನ ಮೂರ್ತಿಗಳಿಗೆ ಇಂದು ಹಾಲೆರೆಯುವ ಸಂಬ್ರಮ ಮನೆ ಮಾಡಿತ್ತು.