ಗ್ರಾಮೀಣ ಭಾಗದಲ್ಲಿ ಕೋವಿಡ್ ಹರಡದಂತೆ ಕ್ರಮ ವಹಿಸಿ: ಚವ್ಹಾಣ

ಬೀದರ:ಮೇ.18: ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಮ್ಮ ಮತಕ್ಷೇತ್ರವಾದ ಔರಾದ (ಬಿ) ತಾಲ್ಲೂಕಿನಲ್ಲಿ ಕೋವಿಡ್ ತಡೆಗೆ ವಿಶೇಷ ಗಮನ ಕೊಡುವ ಹಿನ್ನೆಲೆಯಲಿ ಮತ್ತೊಂದು ವಿಶೇಷ ಸಭೆ ನಡೆಸಿದರು.

ಕೊವಿಡ್ ಹಿನ್ನೆಲೆಯಲ್ಲಿ ಸಭೆ-ಸಮಾರಂಭಕ್ಕೆ ನಿಷೇಧ ಇರುವುದರಿಂದ ಸಚಿವರು, ವಿಡಿಯೋ ಕಾನ್ಪರೆನ್ಸ್ ಮೂಲಕ ಔರಾದ್ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಔರಾದ್ ಮತ್ತು ಕಮಲನಗರ ತಾಲೂಕುಗಳ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಔರಾದ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಕೋವಿಡ್-19ನ ಎರಡನೆ ಅಲೆ ತಡೆಯಲು ಗ್ರಾಮಗಳ ಮಟ್ಟದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ತೆಗೆದುಕೊಂಡ ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.
ಈ ವೇಳೆ ಮಾತನಾಡಿದ ಸಚಿವರು, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕೋವಿಡ್ ವೈರಸ್ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಮನವಿ ಮಾಡಿದರು. ಈಗಾಗಲೇ ಕೊವಿಡ್ ಹಿನ್ನೆಲೆಯಲ್ಲಿ ಗ್ರಾಮಮಟ್ಟದಲ್ಲಿ ಕೂಡ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆ ಸಮಿತಿಯಲ್ಲಿರುವ ಎಲ್ಲರೂ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸಲಹೆ ಮಾಡಿದರು.
ಗ್ರಾಮೀಣ ಭಾಗದ ಜನರಲ್ಲಿ ವಿಶೇಷವಾಗಿ ಶುಚಿತ್ವದ ಬಗ್ಗೆ ಹೆಚ್ಚಿನ ಗಮನ ಕೊಡಲು ಪಂಚಾಯಿತಿ ಮಟ್ಟದಲ್ಲಿ ತಿಳಿವಳಿಕೆಯ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ನಡೆಸಬೇಕು ಎಂದು ಸಚಿವರು ಮನವಿ ಮಾಡಿದರು.
ಲಸೀಕಾಕರಣಕ್ಕೂ ಸಹಕರಿಸಿ: ಗ್ರಾಮೀಣ ಭಾಗದ ಜನರು ಹತ್ತಿರದ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳುವಂತೆ ಜನತೆಗೆ ಹೆಚ್ಚಿನ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು ಎಂದು ಸಚಿವರು ಸಲಹೆ ಮಾಡಿದರು.
ಲಾಕ್‍ಡೌನ್‍ಗೆ ಸಹಕರಿಸಿ: ಗ್ರಾಮೀಣ ಭಾಗದಲ್ಲಿ ಕೂಡ ಲಾಕ್‍ಡೌನ್ ಜಾರಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ವಿಶೇಷವಾಗಿ ಪಿಡಿಓ ಗಳು ಗಮನ ಹರಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಪೆÇಲೀಸ್ ಸಿಬ್ಬಂದಿ ಹಳ್ಳಿಗೆ ಬರಲಿ: ಲಾಕ್‍ಡೌನ್ ಜಾರಿ ಇದ್ದರೂ ಕೆಲವು ಹಳ್ಳಿಗಳಲ್ಲಿ ಗ್ರಾಮೀಣ ಜನರು ಗುಂಪುಗೂಡಿ ಶಾಲಾ ಮೈದಾನ, ಮರಗಳ ಕೆಳಗಡೆ ಕೂಡುವುದು ಕಾಣುತ್ತಿದೆ. ಆದ್ದರಿಂದ ಹಳ್ಳಿಗಳಿಗೆ ಕೂಡ ಪೆÇಲೀಸ್ ಸಿಬ್ಬಂದಿ ನಿಯಮಿತವಾಗಿ ಆಗಮಿಸಿ ಕ್ರಮ ವಹಿಸಬೇಕು ಎಂದು ಕೆಲವು ಪಂಚಾಯಿತಿಗಳ ಅಧ್ಯಕ್ಷರು ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ತಾಲ್ಲೂಕು ಪಂಚಾಯತ್ ಇಓ ಮಾಣಿಕರಾವ್ ಪಾಟೀಲ ಸೇರಿದಂತೆ ಇತರರಿದ್ದರು.