ಗ್ರಾಮೀಣ ಭಾಗಕ್ಕೆ ಬಸ್ಸುಗಳ ಓಡಿಸಿ

ದೇವದುರ್ಗ.ಜ.೧೪-ಹಳ್ಳಿಗಳಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಸಮಯಕ್ಕೆ ಸರಿಯಾಗಿ ಓಡಿಸುವಂತೆ ಒತ್ತಾಯಿಸಿ ಪಟ್ಟಣದ ಬಸ್ ಡಿಪೋ ವ್ಯವಸ್ಥಾಪಕ ಸಿದ್ದಪ್ಪಗೆ ಎಸ್‌ಎಫ್‌ಐ ತಾಲೂಕು ಮುಖಂಡರು ಬುಧವಾರ ಮನವಿ ಸಲ್ಲಿಸಿದರು.
ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು, ಪಟ್ಟಣಕ್ಕೆ ಅಭ್ಯಾಸ ಮಾಡಲು ಶಾಲಾ-ಕಾಲೇಜುಗಳಿಗೆ ಬರುತ್ತಿದ್ದಾರೆ. ಕರೊನಾ ನೆಪದಲ್ಲಿ ಸಾರಿಗೆ ಸಂಸ್ಥೆ ಬಸ್ಸುಗಳನ್ನು ಗ್ರಾಮೀಣ ಭಾಗಗಳಿಗೆ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗಿದ್ದು, ಅನಿವಾರ್ಯವಾಗಿ ಖಾಸಗಿ ವಾಹನಗಳಲ್ಲಿ ಸಂಚರಿಸುವಂತಾಗಿದೆ. ಇದು ಪಾಲಕರಿಗೆ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಗ್ರಾಮೀಣ ಭಾಗಗಳಾದ ಕಮಲದಿನ್ನಿ, ಗೂಗಲ್, ಹಟ್ಟಿ, ಜೋಳದಹೆಡಗಿ, ಅಂಚೆಸುಗೂರ್, ಶಾವಂತಗೇರ ಸೇರಿ ವಿವಿಧ ಮಾರ್ಗಗಳಿಗೆ ಬಸ್ ಓಡಿಸಬೇಕು. ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಬೇಕು ಎಂದು ಒತ್ತಾಯಿಸಿದರು.
ಎಸ್‌ಎಫ್‌ಐ ಪದಾಧಿಕಾರಿಗಳಾದ ಮಹಾಲಿಂಗ ದೊಡ್ಡಮನಿ, ಸುನಿಲ್ ಕುಮಾರ್, ವಿಶ್ವನಾಥ್ ಬಲ್ಲಿದವ್, ಅಮರೇಶ್, ಆನಂದ್ ಕುಮಾರ್, ರಮೇಶ್, ಹಫೀಸ್, ನಾಗರಾಜ್ ಇತರರು ಇದ್ದರು.