ಗ್ರಾಮೀಣ ಭಾಗಕ್ಕೂ ಸೋಂಕಿನ ಭೀತಿ

ನವದೆಹಲಿ,ಏ.೩- ದೇಶದ ಗ್ರಾಮೀಣ ಪ್ರದೇಶಕ್ಕೆ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ ,ಹಾಗೊಂದು ವೇಳೆ ಸೋಂಕು ವ್ಯಾಪಿಸಿದರೆ ಆರೋಗ್ಯ ವ್ಯವಸ್ಥೆ ಒದಗಿಸುವುದು ಕಷ್ಟಕರವಾಗಲಿದೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಈಗಾಗಲೇ ರಾಜ್ಯಗಳ ಎರಡು ಮತ್ತು ಮೂರನೇ ಹಂತದ ನಗರಗಳು ಹಾಗೂ ಅರೆನಗರ, ಪ್ರದೇಶದಲ್ಲಿ ಕೋವಿಡ್ ಸೋಂಕು ಪ್ರಮಾಣ ಗಣನೀಯವಾಗಿ ಹರಡುತ್ತಿರುವುದು ತೀವ್ರ ಕಳವಳಕಾರಿ ಸಂಗತಿ. ಹೀಗಾಗಿ ಗ್ರಾಮೀಣ ಪ್ರದೇಶಕ್ಕೆ ಹರಡದಂತೆ ಜಾಗೃತೆ ವಹಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅದರಲ್ಲಿಯೂ ಸೋಂಕು ನಿತ್ಯ ಏರಿಕೆಯಾಗುತ್ತಿರುವ ದೇಶದ ೧೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ತಡೆಗೆ ಬಿಗಿ ಭದ್ರತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ನಡೆಸಿದ ಸಭೆಯಲ್ಲಿ ಸೋಂಕು ನಿಯಂತ್ರಣ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.
ಮಹಾರಾಷ್ಟ್ರ-ಕರ್ನಾಟಕ, ಪಂಜಾಬ್, ಕೇರಳ, ಛತ್ತೀಸ್ ಗಡ ,ಚಂಡಿಗಢ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಸೋಂಕು ನಿತ್ಯ ಹೆಚ್ಚಳವಾಗುತ್ತಿದೆ. ಎರಡು – ಮೂರು ಹಂತದ ನಗರಗಳ ಜೊತೆಗೆ ಅರೆನಗರ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕುವುದು ತುರ್ತು ಅಗತ್ಯವಿದೆ ಎಂದು ಹೇಳಲಾಗಿದೆ.
ಕಳೆದ ೧೪ ದಿನಗಳಲ್ಲಿ ೧೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ದೇಶದಲ್ಲಿ ದಾಖಲಾಗುತ್ತಿರುವ ಒಟ್ಟಾರೆ ಸೋಂಕಿನ ಪೈಕಿ ಶೇ. ೯೦ ರಷ್ಡು ಸೋಂಕು ಮತ್ತು ಶೇ. ೯೫ ರಷ್ಟು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾವು ಮತ್ತು ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವುದು ದೇಶದಲ್ಲಿ ಮತ್ತೊಮ್ಮೆ ಸೋಂಕು ’ಪೀಕ್ “ಹಂತ ತಲುಪುವ ಸಾದ್ಯತೆಗಳಿವೆ, ಹೀಗಾಗಿ ಎಚ್ಚರವಹಿಸಿ ಎಂದು ಸೂಚನೆ ನೀಡಲಾಗಿದೆ.
ಅದರಲ್ಲೂ ಮಹಾರಾಷ್ಟ್ರದಲ್ಲಿ ನಿತ್ಯ ಸೋಂಕು ಏರಿಕೆಯಾಗುತ್ತಿರುವುದು ತೀವ್ರ ಆತಂಕ ಸೃಷ್ಠಿ ಮಾಡಿದೆ. ನಗರ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಸೋಂಕು ಗ್ರಾಮೀಣ ಪ್ರದೇಶಕ್ಕೆ ಹರಡದಂತೆ ಎಚ್ಚರಿಕೆವಹಿಸಿ ಎಂದು ನಿರ್ದೇಶನ ನೀಡಲಾಗಿದೆ.
ಮಾಹಾರಾಷ್ಟ್ರದಲ್ಲಿ ಇಂದು ಬೆಳಿಗ್ಗೆ ೮ ಗಂಟೆಯ ತನಕ ೪೭,೮೨೭ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ ೨೯.೦೪ ಲಕ್ಷ ಮಂದಿಗೆ ಒಟ್ಟಾರೆ ಸೋಂಕು ಸಂಖ್ಯೆ ಏರಿಕೆಯಾಗಿದೆ
ದೇಶದಲ್ಲಿರುವ ಒಟ್ಟಾರೆ ಸಕ್ರಿಯ ಪೈಕಿ ಮಹಾರಾಷ್ಟ್ರದಲ್ಲಿ ೩.೮೯ ಲಕ್ಷ ಮಂದಿಯಲ್ಲಿ ಸಕ್ರಿಯ ಪ್ರಕರಣ ಏರಿಕೆಯಾಗಿದೆ .ಇದು ಸಹಜವಾಗಿ ಆತಂಕ ಹೆಚ್ಚು ಮಾಡಿದೆ. ಹೀಗಾಗಿ ಅತ್ಯಂತ ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ

೨ ಮತ್ತು ೩ನೇ ಹಂತದ ನಗರಗಳಲ್ಲಿ ಕೊರೊನಾ ಸೋಂಕು ಏರಿಕೆ

ಅರೆನಗರ ,ಪಟ್ಟಣ ಪ್ರದೇಶಗಳಲ್ಲಿ ಸೋಂಕು ದೃಢ

ಗ್ರಾಮೀಣ ಪ್ರದೇಶಕ್ಕೆ ಹರಡದಂತೆ ಎಚ್ಚರಿಕೆ ವಹಿಸಿ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ

ಅದರಲ್ಲಿ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ೧೧ ರಾಜ್ಯಗಳಲ್ಲಿ ಸೋಂಕು ತಡೆಗೆ ಕಠಿಣ ಕ್ರಮ ಅಗತ್ಯ

ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳ ಆತಂಕಕಾರಿ ಬೆಳವಣಿಗೆ

ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸಿದರೆ ಆರೋಗ್ಯಸೇವೆ ಕಲ್ಪಿಸುವುದು ಅಸಾಧ್ಯ.

ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ.