ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳದ ಮೂಲಕ ನೀರು

ಗದಗ,ಏ6 : ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶುದ್ಧ ಕುಡಿಯುವ ನೀರುವ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದು ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳದ ಮೂಲಕ ನೀರು ಪೂರೈಸಲಾಗುವದು ಎಂದು ರಾಜ್ಯ ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ಜಲಜೀವನ ಮಿಷನ ಯೋಜನೆಯಡಿ ಅಂದಾಜು 70 ಲಕ್ಷ ರೂ ಅನುದಾನದಲ್ಲಿ 334 ಮನೆಗಳಿಗೆ ನಳಗಳ ಜೋಡಣೆ ಹಾಗೂ 1ಲಕ್ಷ ಲೀ. ಸಾಮರ್ಥದ ಮೆಲ್ಮಟ್ಟದ ಜಲಾಸಂಗ್ರಹಣಾಗಾರ, ಹಿರೆಕೊಪ್ಪ ಗ್ರಾಮದಲ್ಲಿ ಅಂದಾಜು 74 ಲಕ್ಷ ರೂ ಅನುದಾನದಲ್ಲಿ 643 ಮನೆಗಳಿಗೆ ನಳಗಳ ಜೋಡಣೆ ಹಾಗೂ 50ಸಾವಿರ ಲೀ. ಸಾಮರ್ಥದ ಮೆಲ್ಮಟ್ಟದ ಜಲಾಸಂಗ್ರಹಣಾಗಾರ ಕಾಮಗಾರಿಗೆ ಹಾಗೂ ಅಂದಾಜು 148 ಲಕ್ಷ ರೂ ಅನುದಾನದಲ್ಲಿ 1220 ಮನೆಗಳಿಗೆ ನಳಗಳ ಜೋಡಣೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೆರಿಸಿ ಅವರು ಮಾತನಾಡಿದರು.

ಸಾರ್ವಜನಿಕರು ತೆರಿಗೆ ಹಣದಿಂದಾಗಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗುತ್ತಿದ್ದು ಈ ಕಾಮಗಾರಿಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಭಾಗಿತ್ವ ಅತೀ ಮುಖ್ಯವಾಗಿದೆ ಎಂದರು. ಗ್ರಾಮದಲ್ಲಿನ ಜನರು ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೇ ತಮ್ಮ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಹಕಾರ ನೀಡುವಂತೆ ತಿಳಿಸಿದರು. ಕೋವಿಡ್ ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ತಮ್ಮ ಗ್ರಾಮಗಳಿಗೆ ಅನುದಾನ ಬಿಡುಗಡೆಯಾಗಿರುವದು ಮಹತ್ವದ ಸಂಗತಿಯಾಗಿದೆ. ಬಿಡುಗಡೆಯಾದ ಈ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಗ್ರಾಮದ ಚುನಾಯಿತ ಸದಸ್ಯರಿಂದ ಹಿಡಿದು ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಚಿಕ್ಕೊಪ್ಪ-ಹೊಂಬಳ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಗ್ರಾಮದ ಬಸವೇಶ್ವರ ದೇವಾಲಯದ ದುರಸ್ತಿಗಾಗಿ ಅಗತ್ಯದ ಅನುದಾನ, ಹಿರೇಕೊಪ್ಪ ಗ್ರಾಮದ ಸೇದು ರಸ್ತೆ ನಿರ್ಮಾಣಕ್ಕೆ ಮೂವತ್ತು ಲಕ್ಷ ಅನುದಾನ ಹಾಗೂ ಹುಯಿಲಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ರಸ್ತೆಗೆ ಜಮೀನು ಮಾಲಿಕರು ಅಗತ್ಯದ ಜಾಗೆಯನ್ನು ನೀಡುವುದಾದರೆ ಕೂಡಲೇ ಮೂವತ್ತು ಲಕ್ಷ ರೂ.ಗಳ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ, ತಾಲೂಕು ವೈದ್ಯಾಧಿಕಾರಿ ಡಾ.ನೀಲಗುಂದ, ಗಣ್ಯರುಗಳಾದ ವಸಂತ ಮೇಟಿ, ನಿಂಗಪ್ಪ ಮಣ್ಣೂರ, ಡಾ. ಸತೀಶ ಬಸರಿಗಿಡದ, ಕಲ್ಮೇಶ ವಡ್ಡಿನ,ಶಂಭುಲಿಂಗಯ್ಯ ವಡೆಯರ, ಬಸಪ್ಪ ಹರ್ತಿ, ಶ್ರೀಮತಿ ಹೆಮಾ ಹರಿಜನ, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.