ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ವಿಶೇಷ ಗಮನಹರಿಸಿ:ಗುಂಜನ್ ಕೃಷ್ಣ

ಕಲಬುರಗಿ,ಮೇ.21: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ವಿಶೇಷ ಗಮನಹರಿಸಬೇಕು ಎಂದು ಕೈಗಾರಿಕಾಭಿವೃದ್ದಿ ಆಯುಕ್ತರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಅವರು ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ಅಂಕಿ ಸಂಖ್ಯೆ ಗಮನಿಸಿದಾಗ ಗ್ರಾಮೀಣ ಭಾಗದಲ್ಲಿ ಏರಿಕೆ ಕಂಡುಬಂದಿದ್ದು, ಇದನ್ನು ನಿಯಂತ್ರಿಸುವ ಅಗತ್ಯವಿದೆ ಎಂದರು.

ಗ್ರಾಮೀಣ ಭಾಗದಲಿರುವ ಆಶಾ ಕಾರ್ಯರ್ತೆಯರು ಕೋವಿಡ್ ಸೋಂಕಿಗೆ ಒಳಗಾಗಿ ಗೃಹ ಬಂಧನದಲ್ಲಿದ್ದವರ ಬಗ್ಗೆ ನಿಗಾ ಇಡಬೇಕು ಮತ್ತು ಗೃಹ ಬಂಧನ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಗ್ರಾಮೀಣ ಭಾಗದಲ್ಲಿ ಈಗಾಗಲೆ ಅಸ್ತಿತ್ವದಲ್ಲಿರುವ ಟಾಸ್ಕ್ ಫೋರ್ಸ್ ಸಮಿತಿ ತುಂಬಾ ಜಾಗರೂಕತೆಯಿಂದ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಈ ವೇಳೆ ಮದ್ಯಪ್ರವೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ದಿಲೀಷ್ ಶಶಿ ಜಿಲ್ಲೆಯ ಪ್ರತಿ ತಾಲೂಕಿನ ಕೇಂದ್ರಸ್ಥಾನದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇದರ ಜೊತೆಗೆ ಹಳ್ಳಿ ಜನರ ಅನುಕೂಲಕ್ಕೆ ಹೋಬಳಿ ಮಟ್ಟದಲ್ಲೂ ತೆರೆಯಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ ಜನರು ಕೋವಿಡ್ ಕೇರ್ ಸೆಂಟರ್ ಬರಲು ಹಿಂದೇಟು ಹಾಕುತ್ತಿರುವುದೇ ಗ್ರಾಮೀಣ ಭಾಗದಲ್ಲಿ ಸೋಂಕು ಉಲ್ಬಣಕ್ಕೆ ಕಾರಣವಾಗಿದೆ. ಜಿಲ್ಲೆಯಾದ್ಯಂತ 13 ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, 832 ಹಾಸಿಗೆ ಇವೆ. ಇದರಲ್ಲಿ ಪ್ರಸ್ತುತ 118 ಮಾತ್ರ ರೋಗಿಗಳಿದ್ದು, 714 ಖಾಲಿ ಇವೆ ಎಂದರು. ಇದಕ್ಕೆ ಪ್ರತಿಕ್ರಿಯೆಸಿದ ಉಸ್ತುವಾರಿ ಕಾರ್ಯದರ್ಶಿ ಗ್ರಾಮೀಣ ಜನರ ಮನವೊಲಿಸಲು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆಯಬೇಕು ಎಂದರು.

ಕೋವಿಡ್ ಸೋಂಕು ನಿಯಂತ್ರಣಕ್ಕೆ ಟ್ರೇಸ್, ಟ್ರ್ಯಾಕ್, ಟ್ರೀಟ್‍ಮೆಂಟ್ ತುಂಬಾ ಅವಶ್ಯಕ ಎಂದ ಉಸ್ತುವಾರಿ ಕಾರ್ಯದರ್ಶಿಗಳು ಸರ್ಕಾರವು ಸೋಂಕಿನ ಸರಪಳಿ ಕಡಿತಗೊಳಿಸಲು ಹೇರಿರುವ ಲಾಕ್ ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರ್.ಸಿ.ಹೆಚ್.ಓ ಡಾ.ಪ್ರಭುಲಿಂಗ ಮಾನಕಾರ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ 1570 ಕೋವ್ಯಾಕ್ಸಿನ್, 1350 ಕೋವಿಶೀಲ್ಡ್ ಡೋಸ್ ಲಭ್ಯವಿದೆ. ಶನಿವಾರ ಜಿಲ್ಲೆಗೆ ಮತ್ತೆ 6000 ಕೋವಿಶೀಲ್ಡ್ ಡೋಸ್ ಬರಲಿದೆ. ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಈ ಲಸಿಕೆ ಪ್ರಮಾಣ ಸಾಕಾಗುತ್ತಿಲ್ಲ. ಸಾರ್ವಜನಿಕರ ಹೆಚ್ಚಿನ ಬೇಡಿಕೆ ಕಾರಣ ಜಿಲ್ಲೆಗೆ ಪ್ರತಿ ದಿನ 15000 ಡೋಸ್ ಕೋವಿಡ್ ಲಸಿಕೆ ಪೂರೈಕೆಯಾಗಬೇಕು ಎಂದರು.

ಕೋವಿಡ್ ಲಸಿಕೆ ಪೂರೈಕೆಗೆ ರಾಜ್ಯ ಸರ್ಕಾರ ಜಾಗತಿಕ ಟೆಂಡರ ಕರೆಯಲಾಗಿದೆ. ಇಷ್ಟರಲ್ಲಿಯೆ ರಷ್ಯಾ ನಿರ್ಮಿತ ಸ್ಪುಟನಿಕ್ ಲಸಿಕೆ ಸಹ ಬರಲಿದ್ದು, ಲಸಿಕೆ ಸಮಸ್ಯೆ ನಿವಾರಣೆಯಾಗಬಹುದು ಎಂದು ಗುಂಜನ್ ಕೃಷ್ಣ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಷ್ ಶಶಿ ಮಾತನಾಡಿ ಕೋವಿಡ್ ಆರಂಭದಿಂದಲೂ ಫೆಬ್ರವರಿ-2021ರ ಅಂತ್ಯದವರೆಗೆ 446621 ಸ್ಯಾಂಪಲ್ಸ್ ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ 22007 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ4.9 ಇತ್ತು. 2021ರ ಮಾರ್ಚ್ ದಿಂದ ಇಲ್ಲಿಯವರೆಗೆ 260346 ಸ್ಯಾಂಪಲ್ಸ್ ಪರೀಕ್ಷಿಸಿದಾಗ 36068 ಪ್ರಕರಣಗಳಲ್ಲಿ ಸೋಂಕು ದೃಢವಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.13.85 ರಷ್ಟಿದೆ. ವಾರದ ಹಿಂದೆ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.30 ಇದ್ದರೆ ಕಳೆದ ವಾರ ಶೇ.20ಕ್ಕೆ ಇಳಿದಿದ್ದು, ಪ್ರಸ್ತುತ ಕೋವಿಡ್ ಸೋಂಕು ತುಸು ಇಳಿಮುಖವಾಗಿದೆ. ಪ್ರತಿದಿನ 3000 ಆರ್.ಟಿ.ಪಿ.ಸಿ.ಆರ್ ಮತ್ತು 1000 ಆರ್.ಎ.ಟಿ. ಸೇರಿ 4000 ಸ್ಯಾಂಪಲ್ಸ್ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.

2021ರ ಮಾರ್ಚ್ ಮಾಹೆಯಲ್ಲಿ ಶೇ.2.52, ಏಪ್ರಿಲ್ ಮಾಹೆಯಲ್ಲಿ ಶೇ.11.91 ಹಾಗೂ ಮೇ ಮಾಹೆಯಲ್ಲಿ ಇಲ್ಲಿಯವರೆಗೆ ಶೇ.34.55 ಪಾಸಿಟಿವ್ ಪ್ರಮಾಣ ದಾಖಲಾಗಿದೆ. ಜಿಲ್ಲೆಯಾದ್ಯಂತ 125 ಸರ್ಕಾರಿ, 18 ಖಾಸಗಿ ಸೇರಿ 143 ವ್ಯಾಕ್ಸಿನ್ ಸೆಂಟರ್ ಮೂಲಕ 227023 ಜನರಿಗೆ ಒಂದು ಡೋಸ್, 56558 ಜನರಿಗೆ ಎರಡು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಸೋಂಕು ತಗುಲಿ ಗೃಹ ಬಂಧನದಲ್ಲಿರುವವರ ಆರೋಗ್ಯ ವಿಚಾರಿಸಲು 1300ಕ್ಕೂ ಹೆಚ್ಚು ಶಿಕ್ಷಕರನ್ನು ನಿಯೋಜಿಸಿಕೊಳ್ಳಲಾಗಿದ್ದು, ಇವರು ಪ್ರತಿನಿತ್ಯ ರೋಗಿಯನ್ನು ದೂರವಾಣಿ ಮೂಲಕ ಸಂಪರ್ಕ ಸಾಧಿಸಿ ಅವರ ಆರೋಗ್ಯ ಕ್ಷೇಮ ವಿಚಾರಿಸುತ್ತಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಇಂಜೆಕ್ಷನ್ ಕೊರತೆಯಲ್ಲ ಎಂದರು.

ಅಪರ ಜಿಲ್ಲಾಧಿಕಾರಿ ಮತ್ತು ಆಕ್ಸಿಜನ್ ನೊಡೆಲ್ ಅಧಿಕಾರಿ ಡಾ.ಶಂಕರ ವಣಿಕ್ಯಾಳ ಮಾತನಾಡಿ ಪ್ರಸ್ತುತ ಜಿಲ್ಲೆಗೆ ಪ್ರತಿನಿತ್ಯ 27 ಕೆ.ಎಲ್. ಆಕ್ಸಿಜನ್ ಬೇಡಿಕೆ ಇದೆ. ರಾಜ್ಯ ಸರ್ಕಾರ 25 ಕೆ.ಎಲ್. ಹಂಚಿಕೆ ಮಾಡುತ್ತಿದ್ದು, ಉಳಿದಂತೆ ಸ್ಥಳೀಯ ಸಂಸ್ಥೆಗಳಿಂದ 1500 ಜಂಬೋ ಸಿಲೆಂಡರ್ ಪಡೆಯಲಾಗುತ್ತಿದೆ. ಇದನ್ನು 8 ಸರ್ಕಾರಿ ಮತ್ತು 27 ಖಾಸಗಿ ಆಸ್ಪತ್ರೆಗೆ ಪ್ರತಿನಿತ್ಯ ಆಕ್ಸಿಜನ್ ಪೂರೈಸಲಾಗುತ್ತಿದೆ. ಯಾವುದೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ ಎಂದು ವಿವರಿಸಿದರು.

ಆಕ್ಸಿಜನ್ ಪ್ಲ್ಯಾಂಟ್ ಸ್ಥಾಪನೆಗೆ ಒತ್ತು ಕೊಡಿ: ಆಕ್ಸಿಜನ್ ವಿಚಾರ ಕುರಿತಂತೆ ನಡೆದ ಚರ್ಚೆಯಲ್ಲಿ ಚಿಂಚೊಳಿಯಲ್ಲಿ ಆಕ್ಸಿಜನ್ ಜನರೇಟನ್ ಪ್ಲ್ಯಾಂಟ್ ಇದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸೇಡಂ ಮತ್ತು ಜೇವರ್ಗಿಯಲ್ಲಿ ಸ್ಥಾಪಿಸಲು ಮಂಜೂರಾತಿ ನೀಡಿದೆ ಎಂದು ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್ ಅವರು ಸಭೆಗೆ ತಿಳಿಸುತ್ತಿದ್ದಂತೆ ಜಿಲ್ಲೆಯಾದ್ಯಂತ ತಾಲೂಕಾ ಆಸ್ಪತ್ರೆಯಲ್ಲಿ 500 ರಿಂದ 1000 ಎಲ್.ಪಿ.ಎಂ. ಆಕ್ಸಿಜನ್ ಜನರೇಷನ್ ಪ್ಲ್ಯಾಂಟ್ ಸ್ಥಾಪನೆಗೆ ಒತ್ತು ಕೊಡಿ. ಇದು ಆಕ್ಸಿಜನ್ ಸಮಸ್ಯೆಗೆ ಶಾಸ್ವತ ಪರಿಹಾರ ಸಿಗಲಿದೆ. ಇಲ್ಲಿ ಸಿಮೆಂಟ್ ಕಂಪನಿಗಳು ಹೆಚ್ಚಿದ್ದು, ಅವರ ನೆರವು ಸಹ ಪಡೆಯಬೇಕು. ಈ ನಿಟ್ಟಿನಲ್ಲಿ ಕಾಯೋನ್ಮುಖರಾಗಿ ಎಂದು ಉಸ್ತುವಾರಿ ಕಾರ್ಯದರ್ಶಿಗಳು ಡಿ.ಹೆಚ್.ಓ. ಅವರಿಗೆ ನಿರ್ದೇಶನ ನೀಡಿದರು.

ಮೂರನೇ ಅಲೆಗೂ ಸಿದ್ಧರಾಗಿ: ಕೋವಿಡ್ ಸೋಂಕಿನ ಮೂರನೇ ಅಲೆಗೆ ಈಗಿನಿಂದಲೆ ಸಿದ್ದರಾಗಿ. ಈ ಅಲೆಯಲ್ಲಿ 18 ವರ್ಷದೊಳಗಿನ ಮಕ್ಕಳು ಬಾಧಿತರಾಗಬಹುದು ಎಂದು ತಜ್ಞರು ಅಂದಾಜಿಸಿದ್ದು, ಇದಕ್ಕೆ ಬೇಕಾದ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳಿ. ಐ.ಸಿ.ಯೂ ಮತ್ತು ಆಕ್ಸಿಜನ್ ಬೆಡ್ ಹೆಚ್ಚಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬ್ಲ್ಯಾಕ್ ಫಂಗಸ್ ಆರಂಭಿಕ ಪತ್ತೆ ಹಚ್ಚಿ: ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ಇದರ ಆರಂಭಿಕ ಪತ್ತೆಗಾಗಿ ರೋಗಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲಿಯೆ ಬ್ಲ್ಯಾಂಕ್ ಫಂಗಸ್ ಸಂಬಂಧ ರೋಗಿಗೆ ತಿಳುವಳಿಕೆಯ ಕರಪತ್ರ ನೀಡಬೇಕು. ಸದರಿ ರೋಗಿಗೆ ಫಾಲೋ ಅಪ್ ಮಾಡಿ ಅವರ ಆರೋಗ್ಯ ವಿಚಾರಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ತಿಳಿಸಿದರು.

ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಮಾತನಾಡಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಕಲಬುರಗಿ ವಿಭಾಗದಲ್ಲಿ ಜಿಮ್ಸ್ ಆಸ್ಪತ್ರೆಯನ್ನು ಗುರುತಿಸಲಾಗಿದೆ. ಬೀದರ, ರಾಯಚೂರು ಸೇರಿದಂತೆ ಇದೂವರೆಗೆ 22 ಶಂಕಾಸ್ಪದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ಐ.ಸಿ.ಯೂ ವಾರ್ಡ್ ಸ್ಥಾಪಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಭೆಗೆ ವಿವರಿಸಿದರು.

ಸಭೆಯಲ್ಲಿ ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಇ.ಎಸ್.ಐ.ಸಿ. ಡೀನ್ ಡಾ. ಇವಾನೊ ಲೋಬೋ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಜಿಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಗುರುರಾಜ ದೊಡ್ಡಮನಿ, ಸಹಾಯಕ ಔಷಧ ನಿಯಂತ್ರಕ ಗೋಪಾಲ ಭಂಡಾರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.