ಗ್ರಾಮೀಣ ಪ್ರದೇಶದಲ್ಲಿ ಕೋರೊನಾ ಸೈನಿಕರನ್ನು ನೇಮಿಸಿ: ಡಿ.ಸಿ ರಾಮಚಂದ್ರನ್

ಬೀದರ: ಎ.24:ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಂ ಅವರು ಜಂಟಿಯಾಗಿ ಮೊನ್ನೆ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಯೊಂದಿಗೆ ವಿಡಿಯೋ ಸಂವಾದ ನಡೆಸಿ ಹಲವಾರು ವಿಷಯಗಳನ್ನು ಚರ್ಚಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿ ತಿಳಿಸಿದಂತೆ ಗ್ರಾಮ ಮಟ್ಟದ ಕಾರ್ಯಪಡೆಯು ತನ್ನ ಜವಾಬ್ದಾರಿಗಳನ್ನು ನಿಬಾಯಿಸಬೇಕು. ಎಲ್ಲ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯಪಡೆಗೆ ಅವಶ್ಯಕವಾದ ನೆರವು, ಮಾರ್ಗದರ್ಶನ ಮಾಡಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಸಾಂಕ್ರಾಮಿಕ ರೋಗ ಕೋವಿಡ್ ವೈರಾಣು ಈಗ ಮತ್ತೆ ಎಲ್ಲೆಡೆ ವ್ಯಾಪಕವಾಗಿ ಹರಡಲಾರಂಭಿಸಿದೆ. ಈ ಕಾಯಿಲೆಯು ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಗಟ್ಟಲು ನಾವುಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದದಲ್ಲಿ ಈಗಾಗಲೇ ರಚನೆಯಾದ ಗ್ರಾಮ ಮಟ್ಟದ ಕಾರ್ಯಪಡೆಯು ಸರ್ಕಾರದ ಮಾರ್ಗಸೂಚಿಯನುಸಾರ ಗ್ರಾಮೀಣ ಭಾಗದಲ್ಲಿ ತೀವ್ರ ರೀತಿಯಲ್ಲಿ ಕಾರ್ಯಚಟುವಟಿಕೆಗಳನ್ನು ಆರಂಭಿಸಬೇಕು ಎಂದು ತಿಳಿಸಿದರು.
ಕಾರ್ಯಪಡೆಯಲ್ಲಿರುವ ಎಲ್ಲ ಸದಸ್ಯರು ಸಾರ್ವಜನಿಕರಿಗೆ ಎಲ್ಲಾ ಸಮಯದಲ್ಲಿಯೂ ಸಂಪರ್ಕಕ್ಕೆ ಲಭ್ಯವಿರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಬೇಕು. ಮದುವೆ, ಜಾತ್ರೆ, ಮೆರವಣಿಗೆ, ಸಂತೆ ಹಾಗೂ ಧಾರ್ಮಿಕ ಮತ್ತು ಇತರೆ ಗುಂಪು ಸೇರುವ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ದಿನಸಿ ಅಂಗಡಿ, ಹಾಲಿನ ಕೇಂದ್ರ, ನ್ಯಾಯ ಬೆಲೆ ಅಂಗಡಿ, ಬ್ಯಾಂಕುಗಳು, ಎಟಿಎಂ, ಅರಳಿ ಕಟ್ಟೆಗಳು, ಧಾರ್ಮಿಕ ಸ್ಥಳಗಳು ಔಷಧಿ ಅಂಗಡಿ ಇಲ್ಲಿ ವ್ಯಕ್ತಿಗಳ ನಡುವೆ ಕನಿಷ್ಟ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸಬೇಕು. ಇದಕ್ಕೆ ಅನುಕೂಲವಾಗುವಂತೆ ಇಂತಹ ಸ್ಥಳಗಳಲ್ಲಿ ಚೌಕ ಗುರುತು ಮಾಡಿಸಬೇಕು. ಈ ಕ್ರಮಗಳನ್ನು ತೆಗೆದುಕೊಂಡಿರುವ ಅಂಗಡಿಗಳಿಗೆ ಮಾತ್ರ ತೆರೆದಿರಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಕಾರ್ಯಪಡೆಯ ಸದಸ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋರೋನಾ ಸೈನಿಕರನ್ನು ಗುರುತಿಸಿ: ಗ್ರಾಮಗಳಲ್ಲಿ ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಮತ್ತು ನಿಯಮಿತವಾಗಿ ಕ್ಯೂ ಪದ್ಧತಿಯಲ್ಲಿ ಒಂದು ಮೀಟರ್ ಅಂತರವನ್ನು ಆನುಷ್ಠಾನ ಮಾಡಲು ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬ ಮಹಿಳೆ ಒಬ್ಬ ಪುರುಷ ಸೇರಿ ಇಬ್ಬರನ್ನು ಗ್ರಾಮದಲ್ಲಿನ ಜವಾಬ್ದಾರಿಯುತ, ಆರೋಗ್ಯಕರವಾಗಿರುವ ಸ್ಮಾರ್ಟ್‍ಪೋನ್ ಹೊಂದಿರುವ ಕನಿಷ್ಟ 18 ರಿಂದ 35 ವಯಸ್ಸಿನ ಯುವಕ ಯುವತಿಯರನ್ನು ಗ್ರಾಮ ಕರೋನಾ ಸೈನಿಕರಾಗಿ ನೇಮಿಸಿಕೊಂಡು ಸೇವೆ ಪಡೆಯಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಸುಳ್ಳು ವದಂತಿಗಳು ಹರಡಬಾರದು: ಕರೋನಾ ಕಾಯಿಲೆಯ ಬಗ್ಗೆ ಗ್ರಾಮಗಳಲ್ಲಿ ಸುಳ್ಳು ವದಂತಿಗಳನ್ನು ಹರಡದಂತೆ ಕಾರ್ಯಪಡೆಯು ನೋಡಿಕೊಳ್ಳಬೇಕು. ನರೇಗಾ ಕಾಮಗಾರಿ ಸ್ಥಳದಲ್ಲಿ ಸ್ವಚ್ಛತೆಯಿಂದ ಇರುವ ಬಗ್ಗೆ ತಿಳಿಸಬೇಕು. ಗ್ರಾಮ ಪಂಚಾಯಿತಿ ಕಚೇರಿ, ಬಸ್ ಸ್ಟ್ಯಾಂಡ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯಸವ್ಥೆ ಮತ್ತು ಸಾಬೂನುನಿಂದ ಕೈತೊಳೆದುಕೊಳ್ಳಲು ಸಾಬೂನು ಮತ್ತು ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಕಲ್ಪಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಮಾತನಾಡಿ, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಹರಡದಂತೆ ಗ್ರಾಮ ಪಂಚಾಯಿತಿಗಳಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿ, ಈ ಹಿಂದೆಯೇ ಗ್ರಾಮ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆಯಲ್ಲಿ ಏಳು ಜನ ಸದಸ್ಯರು ಮತ್ತು ಪಿಡಿಓ ಅವರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಾರ್ಯಪಡೆಯ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರು ಕಾರ್ಯಪಡೆಯ ಉಪಾಧ್ಯಕ್ಷರಾಗಿ ಇರುತ್ತಾರೆ.
ಸದಸ್ಯರಾಗಿ ಗ್ರಾಮ ಪಂಚಾಯತಿಯ ಪ್ರತಿಯೊಂದು ಗ್ರಾಮದ ಸದಸ್ಯರು, ಕೇಂದ್ರ ಸ್ಥಾನದ ಗ್ರಾಮ ಲೆಕ್ಕಿಗರು ಅಥವಾ ಕಂದಾಯ ನಿರೀಕ್ಷಕರು ಅಥವಾ ಹೋಬಳಿ ಕೇಂದ್ರ ಸ್ಥಾನವಾಗಿದ್ದಲ್ಲಿ ಉಪ ತಹಸೀಲ್ದಾರರು, ಸ್ಥಳೀಯ ಪೊಲೀಸ್ ಠಾಣೆಯ ಎಸ್‍ಎಚ್‍ಓ ಅಥವಾ ಅವರು ನೇಮಿಸಿದ ಪ್ರತಿನಿಧಿ, ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಥವಾ ಅವರು ನೇಮಿಸಿದ ಪ್ರತಿನಿಧಿ, ಅಂಗನವಾಡಿ ಮೇಲ್ವಿಚಾರಕರು ಅಥವಾ ಅವರ ಪ್ರತಿನಿಧಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಅಥವಾ ಆಶಾ ಕಾರ್ಯಕರ್ತೆ ಅಥವಾ ಎಂಎಲ್‍ಎಚ್‍ಪಿ ಅಥವಾ ಎಂಎಚ್‍ಡಬ್ಲ್ಯೂ., ಸ್ತ್ರಿಶಕ್ತಿ ಸ್ವಸಹಾಯ ಗುಂಪುಗಳ ಪ್ರತಿನಿದಿಗಳು ಕಾರ್ಯನಿರ್ವಹಿಸÀಬೇಕು ಎಂದು ತಿಳಿಸಿದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮತ್ತು ಜಿಲ್ಲಾಧಿಕಾರಿಗಳು ಹೊರಡಿಸುವ ಮಾರ್ಗಸೂಚಿಗಳು ಮತ್ತು ಸುತ್ತೋಲೆಗಳಲ್ಲಿನ ಸೂಚನೆಗಳನ್ನು ಕಾರ್ಯಪಡೆಯು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಕೋರೋನಾ ವೈರಸ್ ನಿಯಂತ್ರಣದ ಬಗ್ಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ಸಲಹೆ ಪಡೆಯಬೇಕು. ಸಮಿತಿಯು ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ನಡೆಸಬೇಕು. ಸಭೆಯ ಕಾರ್ಯಸೂಚಿಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ತಹಸೀಲ್ದಾರ ಗಂಗಾದೇವಿ ಸಿ.ಎಚ್., ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣ ಯದಲಾಪೂರೆ ಹಾಗೂ ಇತರರು ಇದ್ದರು.