ಗ್ರಾಮೀಣ ಪ್ರದೇಶದಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸಿ

ದಾವಣಗೆರೆ,ಡಿ.1: ಏಡ್ಸ್ ಬಗ್ಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವಿನ ಕೊರತೆ ಇದೆ. ಹೀಗಾಗಿ, ಅಸುರಕ್ಷಿತ ಲೈಂಗೀಕ ಕ್ರಿಯೆ ನಡೆಸುವ ಮೂಲಕ ಏಡ್ಸ್ಗೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸೋಂಕಿನ ಬಗ್ಗೆ ಹಳ್ಳಿಗಳಲ್ಲಿ ಹೆಚ್ಚಿನ ಜಾಗೃತಿ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಬಿ.ಎಸ್.ಚನ್ನಬಸಸಪ್ಪ ಕಾಲೇಜಿನ ಕನ್ನಡ ಉನ್ಯಾಸಕ ಪಿ.ಅಣ್ಣೇಶಿ ತಿಳಿಸಿದರು.ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಅನ್ಯ ಸಂಗಾತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವುದರಿಂದ ಏಡ್ಸ್ ಬರುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯ ಇಲಾಖೆಯವರು ಏಡ್ಸ್ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ಹೇಳಿ. ಈ ಪೀಡುಗಿನಿಂದ ಜನರು ದೂರ ಇರುವಂತೆ ಮಾಡಬೇಕು ಎಂದು ಹೇಳಿದರು.ಏಡ್ಸ್ ಸೋಂಕಿತರು ಯಾವುದೇ ಕಾರಣಕ್ಕೂ ಭಯ ಪಡಬಾರದು. ಅಲ್ಲದೆ, ಮೊಳಕೆ ಕಾಳು, ಹಣ್ಣು ಸೇರಿದಂತೆ ಪೋಷಕಾಂಶವುಳ್ಳ ಆಹಾರ ಪದಾರ್ಥವನ್ನು ಸೇವಿಸಿದರೆ ಏಡ್ಸ್ ಸೋಂಕಿತರು ಉತ್ತಮ ಜೀವನ ನಡೆಸಲು ಸಾಧ್ಯವಾಗಲಿದೆ. ಸೋಂಕಿತರ ಕುಟುಂಬದ ಸದಸ್ಯರು ಸಹ ಸೋಂಕಿತರನ್ನು ಕೆಟ್ಟದಾಗಿ ನೋಡುವ ಮೂಲಕ ನಿರ್ಲಕ್ಷಿಸಬಾರದು. ಅವರೊಂದಿಗೆ ಮಾತನಾಡಿದರೆ, ಜೊತೆಗೆ ಕುಳಿತು ಊಟ ಮಾಡಿದರೆ ಈ ರೋಗ ಬರುವುದಿಲ್ಲ. ದೈಹಿಕ ಸಂಪರ್ಕದಿAದ ಮಾತ್ರ ಬರಲಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ.ಎನ್.ಜಯಪ್ರಕಾಶ್ ಮಾತನಾಡಿ, ಶೇ.90ರಷ್ಟು ಎಚ್‌ಐವಿ ಸೋಂಕಿರುವರು ತಮ್ಮ ಎಚ್‌ಐವಿ ಸ್ಥಿತಿಯನ್ನು ತಿಳಿದರಬೇಕು. ಎಆರ್‌ಟಿ ಚಿಕಿತ್ಸೆ ಪಡೆಯಬೇಕು. ಎಚ್ಚರ ವಹಿಸದಿದ್ದರೆ ಎಚ್‌ಐವಿ ಯಾರಿಗೆಬೇಕಾದರೂ ಬರಬಹುದು. ಆದ್ದರಿಂದ ಯಾವತ್ತೂ ಜಾಗೃತರಾಗಿರಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಡ್ಯಾಪ್ಕೋ ಕಾರ್ಯಕ್ರಮಾಧಿಕಾರಿ ಡಾ.ಕೆ.ಎಚ್.ಗಂಗಾಧರ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕ ಡಾ.ನೀಲಕಂಠ, ನಿವಾಸಿ ವೈದ್ಯಾಧಿಕಾರಿ ಡಾ.ಮಂಜುನಾಥ ಪಾಟೀಲ, ಡಾ.ಗೀತಾ, ಜಿ.ಎಸ್.ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.