ಗ್ರಾಮೀಣ ಪ್ರದೇಶಗಳಲ್ಲಿ ವೈಜ್ಞಾನಿಕ ತರಬೇತಿಯ ಅವಶ್ಯಕತೆ ಇದೆ : ಶಾಂತಗೌಡ ನಾಗನಟಗಿ

ಶಹಾಪೂರ : ಜ.5:ಗ್ರಾಮೀಣ ಪ್ರದೇಶ ಮತ್ತು ವಲಸೆ ಕುರಿಗಾರರಿಗೆ ವೈಜ್ಞಾನಿಕ ತರಬೇತಿ ನೀಡುವುದು ಅವಶ್ಯಕವಾಗಿದೆ. ಇಂದಿನ ದಿನಗಳಲ್ಲಿ ಕುರಿ ಸಾಕಾಣಿಕೆ ವಾಣಿಜ್ಯ ಮಾರುಕಟ್ಟೆಯಾಗಿ ಬೆಳೆಯುತ್ತಿದ್ದು,ಕುರಿ ಮಾಂಸಗಳಿಗೆ ಹೊರದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆ ಇದೆ ಎಂದು ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಗಿ ತಿಳಿಸಿದರು. ಶಹಾಪುರದ ಪಶು ಆಸ್ಪತ್ರೆಯ ಸಭಾಂಗಣದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಒಂದು ದಿನದ ವೈಜ್ಞಾನಿಕ ಕುರಿ-ಮೇಕೆ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ವೈಜ್ಞಾನಿಕ ತರಬೇತಿಗಳನ್ನು ರೈತ ಕುರಿಗಾರರು ಪಡೆದುಕೊಳ್ಳಬೇಕು. ಕುರಿ ಸಾಕಾಣಿಕೆ ಶ್ರೀಮಂತ ಉದ್ಯಮವಾಗಿದೆ. ವೈಜ್ಞಾನಿಕವಾಗಿ ಆಹಾರ ಪದ್ಧತಿ, ಕುರಿ ಸಾಕಾಣಿಕೆ, ಇತರ ಕುರಿ ತಳಿಗಳ ಬಗ್ಗೆ ರೈತರು ತಿಳಿದುಕೊಳ್ಳಬೇಕಿದೆ. ಸರಕಾರದಿಂದ ಬರುವ ಹಲವಾರು ಸೌಲಭ್ಯಗಳನ್ನು ಕುರಿಗಾರರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕುರಿಗಾರರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕುರಿ ಮತ್ತು ಉಣ್ಣ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಾದ ಡಾ. ರಾಜಶೇಖರ್ ಕಾಸಭಾಗ,ಪರಂಪರಾಗತವಾಗಿ ಕುರಿ ಸಾಕಾಣಿಕೆ ಮಾಡಿಕೊಂಡು ಬಂದಿರುವ ರೈತರು ಅದನ್ನು ಲಾಭದಾಯಕವಾಗಿ ಮಾಡಿಕೊಂಡು ಹೋಗಬೇಕಿದೆ. ಉತ್ಪಾದನೆ ವೆಚ್ಚ ಕಡಿಮೆ ಮಾಡಿ.ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕು. ರೋಗಗಳ ಪ್ರತಿಬಂಧನೆ, ಆನ್ಲೈನ್ ಮಾರುಕಟ್ಟೆಯ ಮೂಲಕ ಕುರಿ ಮೇಕೆಗಳನ್ನು ಮಾರಾಟ ಮಾಡಬಹುದು. ಬೇಸಿಗೆ ಕಾಲದಲ್ಲಿ ಆಹಾರವನ್ನು ಸಂಗ್ರಹಿಸಿ ಕೊಳ್ಳಬೇಕು. ಗುಣಮಟ್ಟದ ಆಹಾರಗಳನ್ನು ಕೊಡುವುದರಿಂದ ಮಾರುಕಟ್ಟೆಯಲ್ಲಿ ಕುರಿಗಳು ಉತ್ತಮ ಬೆಲೆಗೆ ಮಾರಾಟವಾಗುತ್ತವೆ ಎಂದು ರೈತರಿಗೆ ವೈಜ್ಞಾನಿಕ ತರಬೇತಿಯಲ್ಲಿ ತಿಳಿಸಿದರು.

ಡಾ. ಸಲೀಂ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಬರುವ ರೋಗಗಳು ಮತ್ತು ಅವುಗಳನ್ನು ಪರಿಹರಿಸುವುದರ ಬಗ್ಗೆ ಸವಿಸ್ತಾರವಾಗಿ ಕುರಿಗಾರರಿಗೆ ತಿಳಿಸಿದರು. ಡಾ. ವಿಜಯಕುಮಾರ ಕುರಿಗಳಿಗೆ ಸಮತೋಲನದ ಆಹಾರ ಪೂರೈಕೆ, ರಸಮೇವು ಅಜೋಲ್ಲಾ ಮತ್ತು ಜಲ ಕೃಷಿ ಮೇವು ಉತ್ಪಾದನೆಯ ಬಗ್ಗೆ ತಿಳಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ತಾಲೂಕು ಪಶು ವೈದ್ಯಾಧಿಕಾರಿಗಳಾದ ಷಣ್ಮುಖ ಗೊಂಗಡಿ, ತಾಲೂಕಿನ ಎಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಸಹಕಾರಿ ಸಂಘಗಳ ಅಧ್ಯಕ್ಷರಾದ ಮಾಳಪ್ಪ ಸುಂಕದ ಕೆಂಭಾವಿ, ಬಸವರಾಜ, ಶರಬಣ್ಣ ರಸ್ತಾಪುರ, ಬಲಭೀಮ ಮಡ್ನಾಳ, ನಿಂಗಣ್ಣ ರಾಜಾಪುರ, ಮುನಿಯಪ್ಪ ಗೌಡ ನಾಗನಟಗಿ, ಬೀರಲಿಂಗ ಪೂಜಾರಿ, ನಾಗರಾಜ ಸೇರಿದಂತೆ ಕುರಿಗಾರರ ರೈತರು ಆಸ್ಪತ್ರೆಯ ಸಿಬ್ಬಂದಿಯವರು ಇದ್ದರು.