ಗ್ರಾಮೀಣ ಪ್ರದೇಶಗಳಲ್ಲಿ ನೀರು ಸರಬರಾಜುಸಚಿವ ಪ್ರಿಯಾಂಕ್ ಖರ್ಗೆ ತೀವ್ರ ನಿಗಾ

ಕಲಬುರಗಿ:ಅ.17:ರಾಜ್ಯದ ಬಹುಪಾಲು ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿದ್ದು ಬರ ಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣ ಪ್ರದೇಶಗಳಲ್ಲಿನ ನೀರು ಸರಬರಾಜು ಪರಿಸ್ಥಿತಿಯ ಮೇಲೆ ತೀವ್ರವಾಗಿ ನಿಗಾ ಇರಿಸಿದ್ದಾರೆ. ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ರಾಜ್ಯದಲ್ಲಿನ ಸಧ್ಯದ ಗ್ರಾಮೀಣ ನೀರು ಸರಬರಾಜು ಸ್ಥಿತಿಯನ್ನು ವಿಮರ್ಶಿಸಿದ್ದಾರೆ.

ರಾಜ್ಯದ 36 ತಾಲ್ಲೂಕುಗಳ 100 ಗ್ರಾಮ ಪಂಚಾಯತಿಗಳಲ್ಲಿನ 152 ಗ್ರಾಮಗಳು ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿದ್ದು ತೊಂದರೆಗೀಡಾಗಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಪೈಕಿ 22 ಗ್ರಾಮಗಳಿಗೆ ಇಲಾಖೆಯ ಟ್ಯಾಂಕರ್ ಹಾಗೂ 16 ಗ್ರಾಮಗಳಿಗೆ ಬಾಡಿಗೆ ಆಧಾರದ ಮೇಲೆ ಪಡೆಯಲಾಗಿರುವ ಟ್ಯಾಂಕರ್ ಬಳಸಲಾಗುತ್ತಿದ್ದು, ಪ್ರತಿ ಟ್ಯಾಂಕರ್ ಸರಾಸರಿ ಪ್ರತಿ ನಿತ್ಯ 17 ಟ್ರಿಪ್ ಮೂಲಕ ನೀರು ಸರಬರಾಜು ಮಾಡುತ್ತಿವೆ. 142 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, ಈ ಮೂಲಕ 130 ಗ್ರಾಮಗಳಿಗೆ ನೀರು ಸರಬರಾಜಾಗುತ್ತಿದೆ.

ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಯ ಮೇಲೆ ನಿಗಾ ಇರಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಇತ್ತೀಚಿಗೆ ನಡೆದ ಸಭೆಯಲ್ಲಿ ಸಚಿವರು ಸೂಚಿಸಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಜಿಲ್ಲೆಯ ಅಧಿಕಾರಿಗಳು ಕಳುಹಿಸುವ ಮಾಹಿತಿಯನ್ನು ಆಧರಿಸಿ ವಿಮರ್ಶೆ ಸಭೆ ನಡೆಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಗ್ರಾಮೀಣ ನೀರು ಸರಬರಾಜು ಮಾಡುವಲ್ಲಿ ತೊಂದರೆಯುಂಟಾದಲ್ಲಿ ತಕ್ಷಣವೇ ತಮ್ಮ ಗಮನಕ್ಕೆ ತರಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.