ಗ್ರಾಮೀಣ ಪ್ರದೇಶಕ್ಕೆ ವಿಜ್ಞಾನ ಮುಟ್ಟಿಸುವ ಕಾರ್ಯವಾಗಲಿ

ಕಲಬುರಗಿ,ನ.9: ವಿಜ್ಞಾನ ಮತ್ತು ತಂತ್ರಜ್ಞಾನದ ಫಲ ಪ್ರಯೋಗಾಲಯ ಮತ್ತು ನಗರ ಪ್ರದೇಶಕ್ಕೆ ಸೀಮಿತವಾಗಬಾರದು. ನಮ್ಮ ದೇಶದ ಬಹುಭಾಗ ಜನಸಂಖ್ಯೆ ಹೊಂದಿರುವ ಗ್ರಾಮೀಣ ಪ್ರದೇಶದ ರೈತರು, ಜನಸಾಮಾನ್ಯರಿಗೆ ಮುಟ್ಟಿಸುವ ಕಾರ್ಯ ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿಜ್ಞಾನಿಗಳು ಸೇರಿದಂತೆ ಬುದ್ದಿಜೀವಿಗಳು ಮಾಡಬೇಕಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಆಶಯ ವ್ಯಕ್ತಪಡಿಸಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ‘ಸ್ವಾತಿ, ಶಿವಾ ವಿದ್ಯಾ ಮಂದಿರ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನರು ಮೂಢನಂಬಿಕೆಯಿಂದ ಹೊರಬರಬೇಕು. ವಿಜ್ಞಾನದ ಸದುಪಯೋಗವನ್ನು ಮಾಡಿಕೊಂಡು ಉನ್ನತ ಸಾಧನೆ ಮಾಡುವ ಮೂಲಕ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಸಾಲಿನಲ್ಲಿ ಭಾರತ ಅಗ್ರಗಣ್ಯ ಸ್ಥಾನದಲ್ಲಿರಲು ಶ್ರಮಿಸಬೇಕಾಗಿದೆ. ವಿಜ್ಞಾನವಿಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ ಎಂಬ ಸ್ಥಿತಿ ಕಂಡುಬರುತ್ತಿರುವುದು ವಿಜ್ಞಾನದ ಮಹತ್ವವನ್ನು ತೋರಿಸುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ವೈಜ್ಞಾನಿಕ ಅಂಶಗಳನ್ನು ಮೂಡಿಸಬೇಕಾಗಿದೆ. ಪ್ರಸ್ತುತ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಚಿತ್ತಹರಿಸಬೇಕಾಗಿದೆ. ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಅನೇಕ ವಿಜ್ಞಾನಿಗಳು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ಯಾವುದೇ ಒಂದು ರಾಷ್ಟ್ರದ ಅಭಿವೃದ್ದಿ, ಆ ರಾಷ್ಟ್ರದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಮೇಲೆ ನಿಂತಿದೆ. ವಿಜ್ಞಾನವು ಹೊಸ ಸಂಶೋಧನೆಗಳ ಮೂಲಕ ಅನೇಕ ಸೌಕರ್ಯಗಳನ್ನು ದೊರೆಯುವಂತೆ ಮಾಡುವ ಮೂಲಕ, ಯಾವುದೇ ರಾಷ್ಟ್ರವು ಅತ್ಯಂತ ಶೀಘ್ರವಾಗಿ ಅಭಿವೃದ್ಧಿ ಹೊಂದುವಂತೆ ಮಾಡುತ್ತದೆ.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಕ.ರಾ.ಪ್ರಾ.ಶಾ.ಶಿ.ಸಂಘದ ರಾಜ್ಯ ಉಪಾಧ್ಯಕ್ಷ ಪರಮೇಶ್ವರ ಬಿ.ದೇಸಾಯಿ, ಕಸಾಪ ಉತ್ತರ ವಲಯ ಕಾರ್ಯದರ್ಶಿ ನಾಗೇಶ ತಿಮಾಜಿ ಬೆಳಮಗಿ, ಭೂಸನುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗೇಂದ್ರಪ್ಪ ಕಲಶೆಟ್ಟಿ, ಯುವ ಪ್ರತಿಭಾವಂತ ಶಂಭುಲಿಂಗ ಕೆಳಗಿನಮನಿ ಹಾಗೂ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.