ಗ್ರಾಮೀಣ ಪ್ರತಿಭೆ ಸಂಕೀರ್ಥ್ ಅದ್ವಿತೀಯ ಸಾಧನೆ

ಕೋಲಾರ,ಆ.೨೧- ಕೆಜಿಎಫ್ ತಾಲ್ಲೂಕಿನ ಗೋಪೆನಹಳ್ಳಿ ಗ್ರಾಮದ ಯುವಕ ಸಂಕೀರ್ಥ್ ಸಾಂಸ್ಕೃತಿಕ ಮತ್ತು ಕ್ರೀಡೆ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಕೀರ್ತಿ ತರುವ ಮೂಲಕ ಇತರೆ ಯುವಕರಿಗೆ ಸ್ಪೂರ್ತಿಯಾಗಿದ್ದಾನೆ ಬಡತನದಿಂದ ಬೆಳೆದ ಬಂದು ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇವತ್ತು ಖೋಖೋ ಹಾಗೂ ಸಾಂಸ್ಕೃತಿಕ ರಂಗದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ.
ಕ್ರೀಡೆಯ ಜೊತೆಗೆ ಸಾಂಸ್ಕೃತಿಕ ಸೌರಭ, ಕರ್ನಾಟಕ ನಾಟಕ ಅಕಾಡೆಮಿ, ಖಾದಿ ಉತ್ಸವ, ಗಿರಿಜನ ಉತ್ಸವ, ರಾಜ್ಯಮಟ್ಟದ ಯುವ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಹೊರನಾಡು ಉತ್ಸವ, ಅಂತರರಾಷ್ಟ್ರೀಯ ಯುವ ಉತ್ಸವ ಮತ್ತು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದ ಜಾನಪದ ಉತ್ಸವದಲ್ಲಿ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉನ್ನತ ಪ್ರಶಸ್ತಿಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಕೆಜಿಎಫ್ ತಾಲೂಕಿನ ಬೇತಮಂಗಲ ಬಂಗಾರು ತಿರುಪತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಿಡಿದು ಜಿಲ್ಲಾ ಮಟ್ಟ, ಅಂತರ್ ರಾಜ್ಯ ಮತ್ತು ಅಂತರ್ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಗಳಲ್ಲಿ ತಮ್ಮ ತಂಡವನ್ನು ಜಯಸುವಲ್ಲಿ ಯಶಸ್ವಿಯಾಗಿದ್ದಾನೆ. ೨೦೧೨ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಖೋಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ೨೦೧೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಸೇರಿದಂತೆ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾನೆ.
ಕ್ರೀಡಾಪಟು ಸಂಕೀರ್ಥ್ ಪ್ರಸ್ತುತ ಬೆಂಗಳೂರಿನ ಇಂಪಾಕ್ಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಯುವಕರಲ್ಲಿ ಸ್ಫೂರ್ತಿಯನ್ನು ತುಂಬಿ ಸಾದನೆ ಗಳಿಸುವಂತೆ ಮಾಡಲಿ ಎಂಬುದು ಜಿಲ್ಲೆಯ ತಾಲೂಕಿನ ಜನರ ಆಸೆಯಾಗಿದೆ.
ಸಂಕೀರ್ಥ್ ಸಾಧನೆಗೆ ಕೆಜಿಎಫ್ ತಾಲೂಕಿನ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ನಡೆದ ೭೭ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಸಾಧನೆಯನ್ನು ಗುರುತಿಸಿ ಕ್ಷೇತ್ರದ ಶಾಸಕಿ ರೂಪಕಲಾ ರವರು ೨೦೨೩ ರ ಯುವ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೆಜಿಎಫ್ ಪೋಲಿಸ್ ವರಿಷ್ಟಾಧಿಕಾರಿ ಶಾಂತರಾಜು ಮತ್ತು ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.