ಗ್ರಾಮೀಣ ದೀಪಾವಳಿ ಅಪರೂಪವಾಗುತಿದೆ ಆಣಿಪೀಣಿ ಹಾಡುಗಳ ಆಚರಣೆ

*ವಿಜಯೇಂದ್ರ ಕುಲಕರ್ಣಿ
ದೀಪಾವಳಿ ಹಬ್ಬವನ್ನು ಗ್ರಾಮೀಣರು ಆಚರಿಸುವ ಪರಿ ಅನನ್ಯವಾದದ್ದು. ಈ ಹಬ್ಬದಲ್ಲಿ ಲಕ್ಷ್ಮೀಯನ್ನು ಗಂಗೆಯನ್ನು ಪೂಜಿಸುವದು, ಅಣ್ಣ ತಮ್ಮಂದಿರಿಗೆ ಆರತಿ ಬೆಳಗುವುದು,ಸಗಣಿಯಿಂದ ಪಾಂಡವರನ್ನು ಮಾಡಿ ಪೂಜಿಸುವದು. ಹೀಗೆ ನಾನಾ ತರಹದ ಆಚರಣೆಗಳು ಇವೆ.
ರೈತ ತನ್ನ ಬದುಕಿನ ಜೀವಾಳವಾದ ದನಕರುಗಳಿಗೆ ಒಳ್ಳೆಯದಾಗಲಿ ಎಂದು ಇಂತಹ ವಿಶೇಷ ಸಂದರ್ಭದಲ್ಲಿ ಹಾರೈಸುವುದು ಸಹಜವೇ ಆಗಿದೆ. ದನ ಕರುಗಳಿಗೆ ದೀಪಾವಳಿ ಹಬ್ಬದಲ್ಲಿ ಬೆಂಕಿಯನ್ನು ದಾಟಿಸುತ್ತಾರೆ. ಅಲ್ಲದೆ ಈ ಸಂದರ್ಭದಲ್ಲಿ ಅವುಗಳಿಗೆ ಆರತಿ ಬೆಳಗಿ ಹಾಡು ಹೇಳುವ ವಿಶಿಷ್ಟ ಸಂಪ್ರದಾಯವು ನಮ್ಮ ರಾಜ್ಯದಲ್ಲಿ ಭಿನ್ನ ಭಿನ್ನ ಪದ್ಧತಿಯೊಂದಿಗೆ ಆಚರಣೆಯಲ್ಲಿದೆ. ಇಂತಹ ಹಾಡುಗಳಿಗೆ ಉತ್ತರ ಕರ್ನಾಟಕದಲ್ಲಿ ಆಣಿ ಪೀಣಿ ಅಥವಾ ಆಣಿ ಪೀಣ್ಗಿ ಹಾಡುಗಳೆಂದು ಕರೆಯುತ್ತಾರೆ. ಈ ಆಚರಣೆ ಇತ್ತೀಚಿನ ವರ್ಷಗಳಲ್ಲಿ ಅಪರೂಪವಾಗುತ್ತ ಸಾಗಿದೆ.
ಆಣಿಪೀಣಿ ಹಾಡು ಹಾಡಿನ ಆಚರಣೆಯಲ್ಲಿ ವಿಶೇಷವಾಗಿ ಪಾಲ್ಗೊಳ್ಳುವುದು ಗ್ರಾಮದ ಪಶುಪಾಲಕ (ದನಗಾಹಿ) ಹುಡುಗರು. ಹಳ್ಳದ ದಂಡೆಯಲ್ಲಿ ಯಥೇಚ್ಛವಾಗಿ ಬೆಳೆಯುವ ಜೇಕು ಅಥವಾ ಆಪು ಎಂಬ ಒಂದು ಬಗೆಯ ಹುಲ್ಲನ್ನು ಕೊಯ್ದುಕೊಂಡು ಬಂದು ಅದರಿಂದ ಹಾವಿನ ಹೆಡೆಯ ಆಕಾರ ಮಾಡುತ್ತಾರೆ. ಇದನ್ನು ಅಮರೆ(ಅವರೆ) ಮುಂತಾದ ಹೂಗಳಿಂದ ಅಲಂಕರಿಸಿ ಒಳಗೆ, ಎಣ್ಣೆ ಬತ್ತಿ ಹಾಕಿ ಹಣತೆಯನ್ನು ಹಚ್ಚಿಡುತ್ತಾರೆ. ಹೀಗೆ ತಯಾರು ಮಾಡಿದ ಹೆಡಿಯನ್ನು ನೀರು ತುಂಬುವ ಹಬ್ಬದ ದಿನದಿಂದ (ನರಕ ಚತುರ್ದಶಿಯ ಹಿಂದಿನ ದಿನ)ಆಚರಣೆ ಆರಂಭ . ಅಂದು ಕತ್ತಲಾದ ನಂತರ ತಮ್ಮ ಓಣಿಯಲ್ಲಿನ ದನಕರುಗಳಿರುವ ಮನೆ ಮನೆಗಳಿಗೆ ಹೋಗಿ ಹುಡುಗರು ಆರತಿ ಬೆಳಗುತ್ತಾರೆ. ಹಿಂದೆ ಏಳುದಿನಗಳವರೆಗೂ ಬೆಳಗುತ್ತಿದ್ದ ಪದ್ಧತಿ ಈಗ ಐದು ದಿನಕ್ಕಿಳಿದಿದೆ. ಎತ್ತು, ಆಕಳು, ಎಮ್ಮೆ , ಹೋರಿ ಮುಂತಾದವುಗಳಿಗೆ ಬೆಳಗುವಾಗ ಅವುಗಳಿಗೆ ಅನ್ವಯಿಸುವಂತೆ ಬೇರೆ ಬೇರೆ ಪದಗಳನ್ನುಹಾಡುತ್ತಾರೆ.
ಎತ್ತಿಗೆ ಬೆಳಗುವಾಗ ಹಾಡುವುದು ಹೀಗೆ:
ಲಕ್ಕಪ್ಪ ಲಕ್ಕಪ್ಪ ಲಾಲ,ಟೆಂಗಿನಕ್ಕ ಸಾಲ
ಸಾಲಿಗಿ ನವುಲ
ನವುಲ ಪುಚ್ಚ ಕಿತ್ತಿ, ಚಿಗರಿ ಕೊಂಬಿಗೆ ಹಚ್ಚಿ
ಚಿಗರಿ ಹೊಡೆ ಜಾಣ, ಭಜನಿ ತಾಣ
ಅವನಿಗೇನು ಧಾಡಿ ? ಹುಣಚಿ ರಾಡಿ.
ಜ್ವಾಳದ ಹಿಟ್ಟ ,ಜಾಡಿಸಿ ಕೊಟ್ಟ
ಗೋಧಿ ಹಿಟ್ಟ,ಪದರಾಗ ಕಟ್ಟಿದ
ಆಣಿಗೋ ಪೀಣಿಗೋ ನಮ್ಮೆತ್ತಿನ ಪೀಡಾ ಚಾಕ್ಳೋ
ಆಕಳಿಗೆ ಬೆಳಗುವಾಗ:
ಹಂಡ ಆಕಳ ಬಂಡ ಆಕಳ ಶಂಕರೆಪ್ಪನ ಗಿಡ್ಡ ಆಕಳ
ಕಳ್ಳರ ಕಟ್ಯಾರ ಕಟಕರು ನುಂಗ್ಯಾರ…
ಎಮ್ಮೆಗೆ ಬೆಳಗುವಾಗ:
ಟುರ್ ಚಿಟಮಿಣಿ,ನಾಗರಮಣಿ
ದೌಳರ ಎಮ್ಮಿ ಕಾಯಿತ್ ಬಂದ್ಯಾ
ಕೆನಿ ಕೆನಿ ಮಸರ ಹೊಡಕೋತ ಬಂದ್ಯಾ…
ಪಶು ಸಂಪತ್ತು ವೃದ್ಧಿಯಾಗಿ ಅವುಗಳಿಗೆ ಯಾವ ಪೀಡೆ ತಗುಲದಿರಲಿ ಎಂಬ ಹಾರೈಕೆ ಈ ಆಚರಣೆಯ ಉದ್ದೇಶ. ಹೀಗೆ ಬೆಳಗುವುದರಿಂದ ದನಕರುಗಳು ಆರೋಗ್ಯದಿಂದ ಇರುತ್ತವೆ ಎಂಬುದು ಹಳ್ಳಿಗರ ಬಲವಾದ ನಂಬಿಕೆ. ಹೀಗೆ ಬೆಳಗಲು ತರುವ ಹೆಡಿ ದಿನ ದಿನವೂ ಹೊಸದೇ ಆಗಿರಬೇಕೆಂಬ ಕಟ್ಟಳೆ ಇದೆ. ಬೆಳಗಿದ ನಂತರ ಅದನ್ನು ಯಾರೂ ತಿರುಗಾಡದ ದಾರಿಯಲ್ಲಿ ಒಗೆದು ಬರುತ್ತಾರೆ.ಮೊದಲನೇ ದಿನ ಬೆಳಗಲು ಬಂದಾಗ ಎರಡು ಹೆಡೆ ಹೆಣೆದಿರುತ್ತಾರೆ. ದಿನದಿಂದ ದಿನಕ್ಕೆ ಒಂದೊಂದು ಹೆಡೆ ಹೆಚ್ಚುತ್ತ ಹೋಗುತ್ತದೆ. ಬೆಳಗುವ ಎಲ್ಲ ಮನೆಗಳಲ್ಲೂ ದೀಪಕ್ಕೆ ಎಣ್ಣೆಯನ್ನು ಸ್ವಲ್ಪ ಹಣವನ್ನು ಪಡೆದುಕೊಳ್ಳುತ್ತಾರೆ. ಹಣವನ್ನು ಎಲ್ಲಿ ಹುಡುಗರು ಸಮನಾಗಿ ಹಂಚಿಕೊಳ್ಳುತ್ತಾರೆ. ಜಾತಿ ಭೇದವಿಲ್ಲದೆ ಎಲ್ಲ ಹುಡುಗರು ಇದರಲ್ಲಿ ಪಾಲ್ಗೊಳ್ಳುವುದು ಒಂದು ವಿಶೇಷ.ದೀಪಾವಳಿ ಹಬ್ಬದಲ್ಲಿ ಹಳ್ಳಿ ಹಳ್ಳಿಗಳ ಕತ್ತಲುತುಂಬಿದ ಕೊಟ್ಟಿಗೆಗಳಲ್ಲಿ ಆಣಿಗೋ ಪೀಣಿಗೂ ಹಾಡಿನ ಹೊಳೆ ಹರಿಸುತ್ತ ದೀಪ ತರುವ ಹುಡುಗರ ದನಿ ಇನ್ನೂ ಇನ್ನೂ ಕೇಳುತ್ತಲೇ ಇರಲಿ ಎಂಬುದು ಜನಪದ ಪ್ರೇಮಿಗಳ ಆಶಯ.