ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರಕ್ಕೆ ಚಾಲನೆ

ಬೀದರ:ಮೇ.31:ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಅಡಿಯಲ್ಲಿ ಬರುವ ತೋಟಗಾರಿಕೆ ಮಹಾವಿದ್ಯಾಲಯ, ಬೀದರನ ಅಡಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಮೂರು ತಿಂಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರವನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳಿ ಗ್ರಾಮದಲ್ಲಿ ದಿನಾಂಕ: 29.05.2024 ರಂದು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಯಲ್ಲಿ, ಈ ಶಿಬಿರದಲ್ಲಿ ಐದು (ಐನೋಳಿ, ಕೋಳ್ಳೂರು, ಆಣಾವರ, ದೇಗಲಮಡಿ ಮತ್ತು ಚಿಮ್ಮಾ-ಇದಲಾಯಿ) ಗ್ರಾಮಗಳನ್ನು ದತ್ತು ಪಡೆದುಕೊಂಡು ವಿದ್ಯಾರ್ಥಿಗಳು ಮೂರು ತಿಂಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಿ ರೈತರ ಅನುಭವವನ್ನು ಪಡೆಯಲು ಮತ್ತು ರೈತರಿಗೆ ವೈಜ್ಞಾನಿಕವಾಗಿ ಮಾಹಿತಿ ನೀಡಲು ಈ ಶಿಬಿರದ ಮೂಲ ಉದ್ದೇಶವಾಗಿರುತ್ತದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ: ಶಶಿಕಲಾ ಎಸ್. ರೂಳಿ ಸಹಾಯಕ ಪ್ರಾಧ್ಯಾಪಕರು (ಕೃಷಿ ವಿಸ್ತರಣಾ) ತಿಳಿಸಿದರು.

ಉದ್ಘಾಟಕರಾಗಿ ಆಗಮಸಿದ ಶ್ರೀಮತಿ ಕಮಲಾಬಾಯಿ ಸೇವು ಪವಾರ, ಅಧ್ಯಕ್ಷರು, ಗ್ರಾಮ ಪಂಚಾಯತ್, ಐನೋಳಿ ಇವರು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ನಂತರ ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಯಶಸ್ವಿಯಾಗಲು ಶ್ರಮಿಸಬೇಕು. ವಿದ್ಯಾರ್ಥಿಗಳು ಮತ್ತು ರೈತರ ನಡುವೆ ಸಲಹೆ-ಸೂಚನೆಗಳ ಸಮಾಲೋಚನೆಯ ಮೂಲಕ ಪರಸ್ಪರ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲು ಇದೊಂದು ಸದಾವಕಾಶವೆಂದು ಹೇಳಿದರು.

  ಶ್ರೀ ಚಂದ್ರಶೇಖರ, ನಿವೃತ್ತ ಮುಖ್ಯೋಪಾಧ್ಯಾಯರು, ಚಿಮ್ಮಾ-ಇದಲಾಯಿ ಗ್ರಾಮ ಇವರು ಮಾತನಾಡುತ್ತಾ, ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸಾಹ ಮತ್ತು ಆಸಕ್ತಿಯಿಂದ ತಮ್ಮನ್ನು ತಾವು ತೊಡಗಿಸಿಕೊಂಡು ರೈತರಿಗೆ ವೈಜ್ಞಾನಿಕವಾಗಿ ಸಲಹೆ ನೀಡಲು ತಿಳಿಸಿದರು.  
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಡಾ. ಎಸ್. ವಿ.  ಪಾಟೀಲ್, ಡೀನ್ ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಇವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಲು ವಿದ್ಯಾರ್ಥಿಗಳು ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿತೆಗಳ ಮೂಲಕ ತಿಳಿಸಿಕೊಡಬೇಕೆಂದು ಕರೆ ನೀಡಿದರು.  ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಯಾವುದಾದರೂ ಸಮಸ್ಯೆಗಳು ಕಂಡುಬಂದರೆ ಮಹಾವಿದ್ಯಾಲಯದ ವಿಜ್ಞಾನಿಗಳು ನೇರವಾಗಿ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವರು ಎಂದು ಹೇಳಿದರು.  ತಮ್ಮ ವೈಯಕ್ತಿಕ ವ್ಯವಸಾಯದ ಅನುಭವವನ್ನು ರೈತರೊಂದಿಗೆ ಹಂಚಿಕೊಳ್ಳುತ್ತಾ ಬೆಳೆಗಳ ಮೇಲೆ ವಿಮೆ ಹೇಗೆ ಮಾಡಿಸಬೇಕೆಂಬುದರ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.  ಈ ವರ್ಷ "ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ" ವನ್ನು ಐನೋಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಈ ಭಾಗದ ರೈತರು ಹೆಚ್ಚಿನ ಉಪಯೋಗವನ್ನು ನಮ್ಮ ವಿಜ್ಞಾನಿಗಳಿಂದ ಪಡೆಯಬೇಕೆಂದು ಸಲಹೆ ನೀಡಿದರು.  
  ಈ ಕಾರ್ಯಕ್ರಮದಲ್ಲಿ ಡಾ: ಕಡ್ಲಿ ವೀರೇಶ ಸಹಾಯಕ ಪ್ರಾಧ್ಯಾಪಕರು (ಕೃಷಿ ಅರ್ಥಶಾಸ್ತ್ರ) & ಕಾರ್ಯಕ್ರಮ ಸಂಯೋಜಕರು ಮತ್ತು ಸಹಾಯಕ ಪ್ರಾಧ್ಯಾಪಕರುಗಳಾದ ಡಾ: ಅಂಬ್ರೇಶ, ಡಾ: ಅರವಿಂದ ಕುಮಾರ ರಾಠೋಡ, ಡಾ: ದುಶಂತ ಓಲೇಕಾರ, ಶ್ರೀಮತಿ ಅನುರಾಧಾ ಆರ್.ಡಬ್ಲ್ಯೂ ಮತ್ತು ಶ್ರೀಮತಿ ಜಾನವಿ ಡಿ.ಆರ್., ಹಾಗೂ ಐನೋಳಿ, ಕೋಳ್ಳೂರು, ಆಣಾವರ, ದೇಗಲಮಡಿ ಮತ್ತು ಚಿಮ್ಮಾ-ಇದಲಾಯಿ ಗ್ರಾಮಗಳ ಪ್ರಗತಿಪರ ರೈತರು, ಗ್ರಾಮಸ್ಥರು, ಮುಖ್ಯಸ್ಥರು ಮತ್ತು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯಾದ ಸ್ನೇಹಾ ಅರಳಿ ಕಾರ್ಯಕ್ರಮ ನಿರೂಪಿಸಿದರು, ಶಿವಾನಂದ ಸ್ವಾಗತಿಸಿದರು ಮತ್ತು ನವೀನ ವಂದಿಸಿದರು.