ಗ್ರಾಮೀಣ ಜನರ ವಲಸೆ ತಪ್ಪಿಸಿ

ಬೀದರ್:ನ.11: ಆಯಾ ಪಂಚಾಯಿತಿ ವ್ಯಾಪ್ತಿಯಲ್ಲೇ ಕೆಲಸ ಕೊಟ್ಟು ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಆಯುಕ್ತೆ ಶಿಲ್ಪಾ ನಾಗ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಾಬ್ ಕಾರ್ಡ್ ಹೊಂದಿದ ಕುಟುಂಬಗಳಿಗೆ 100 ದಿನಗಳ ಕೆಲಸ ಕೊಡಬೇಕು. ಕಾಮಗಾರಿಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ವಯೋವೃದ್ಧರಿಗೆ ಶೇ 50 ರಷ್ಟು ಕಡಿಮೆ ಕೆಲಸ ನೀಡಬೇಕು. ಶೇ 10 ರಷ್ಟು ರಿಯಾಯಿತಿ ಇರುವ ಲೈಂಗಿಕ ಅಲ್ಪಸಂಖ್ಯಾತರಿಗೂ ಯೋಜನೆ ಲಾಭ ತಲುಪಿಸಬೇಕು ಎಂದು ತಿಳಿಸಿದರು.
ಮಹಿಳಾ ಮೇಟಿಗಳ ಸಂಖ್ಯೆ ಹೆಚ್ಚಿಸಬೇಕು. ಸಮುದಾಯ ಕಾಮಗಾರಿಗಳಂತೆಯೇ ವೈಯಕ್ತಿಕ ಕಾಮಗಾರಿಗಳಿಗೂ ಮಹತ್ವ ನೀಡಬೇಕು. ಅಧಿಕಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ, ಜನರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.
ತೋಟಗಾರಿಕೆ ಜಂಟಿ ಉಪ ನಿರ್ದೇಶಕ ಶ್ರೀಶೈಲ್ ದಿಡ್ಡಿಮನಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ, ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಯೋಜನಾ ನಿರ್ದೇಶಕರಾದ ಜಗನ್ನಾಥ ಮೂರ್ತಿ, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಬಾಲಾಜಿ ಕೋಟೆ, ಕೃಷಿ ಸಹಾಯಕ ನಿರ್ದೇಶಕಿ ರೇಷ್ಮಾ ಇದ್ದರು