ಗ್ರಾಮೀಣ ಜನರ ಆರ್ಥಿಕತೆ ಸುಧಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ

ಚಾಮರಾಜನಗರ:ಮಾ:29 ಸಹಕಾರ ಸಂಘಗಳು ಹಾಗೂ ಗ್ರಾಮೀಣ ಜನರ ಬದುಕು ಹಸನ ಗೊಳಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ರೂಪಿಸಿರುವ ಯೋಜನೆಗಳು ಜನಮನ್ನಣೆಯನ್ನು ಪಡೆದುಕೊಳ್ಳುತ್ತಿವೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕಿನ ಬಿ.ಜಿ. ಕಾಲೋನಿಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾ ಅಭಿವೃದ್ದಿ ಯೋಜನೆಯಿಂದ 75 ಸಾವಿರ ರೂ.ಗಳ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಸಾವಿರಾರು ಸಂಘಗಳನ್ನು ಸ್ಥಾಪನೆ ಮಾಡಿ, ಗ್ರಾಮೀಣ ಜನರ ಅರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.ಜನರಲ್ಲಿ ಉಳಿತಾಯ ಮನೋಭಾವನೆ, ಸೇವಾ ಮನೋಭಾವನೆ ಜಾಗೃತಿ ಮೂಡಿಸುತ್ತಿರುವುದು ಇತರೆ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡಗಳ ನಿರ್ಮಾಣ, ಸಹಕಾರ ಸಂಘಗಳು, ದೇವಸ್ಥಾನಗಳ ಜೀರ್ಣೋದ್ದಾರ, ಆಶಕ್ತರಿಗೆ ಸಹಾಯ ಹಸ್ತದಂತಹ ಹತ್ತು ಹಲವು ಕಾರ್ಯಕ್ರಮಗಳು ಜನರಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಬಗ್ಗೆ ಹೆಚ್ಚಿನ ಅಭಿಮಾನ ಮೂಡಿಸಿದೆ ಎಂದು ರವಿಕುಮಾರ್ ತಿಳಿಸಿದರು.
ಸಂಸ್ಥೆಯ ಯೋಜನಾಧಿಕಾರಿ ಬೇಬಿ ಚೆಕ್ ವಿತರಿಸಿ ಮಾತನಾಡಿ, ತಾಲೂಕಿನ ಗಡಿ ಭಾಗದಲ್ಲಿರುವ ಬಿ.ಜಿ. ಕಾಲೋನಿಯ ಹಾಲು ಉತ್ಪಾದಕರ ಸಹಕಾರ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸ್ವಂತ ಕಟ್ಟಡವನ್ನು ಹೊಂದುವ ನಿಟ್ಟಿನಲ್ಲಿ ಡೇರಿಗೆ ಸಂಸ್ಥೆಯಿಂದ 75 ಸಾವಿರ ರೂ. ಸಹಾಯ ಧನ ನೀಡಿದ್ದೇವೆ. ಮಹಿಳೆಯರು ಹಾಗೂ ರೈತಾಪಿ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶವನ್ನು ಹೊಂದಿದೆ. ಈ ರೀತಿ ಧರ್ಮಸ್ಥಳ ಸಂಸ್ಥೆಯು ಜಿಲ್ಲೆಯ ಜನರ ಸರ್ವತೋಮುಖ ಅಭಿವೃದ್ದಿಯನ್ನು ಬಯಸಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡೇರಿ ಅಧ್ಯಕ್ಷ ಮಹದೇವಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ವಿ. ಪ್ರಭುಸ್ವಾಮಿ, ಡೇರಿ ಮಾಜಿ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಚನ್ನಬಸಪ್ಪ, ಸಂಸ್ಥೆಯ ವಲಯಾಧಿಕಾರಿ ವೀರೇಶ್, ಕಾರ್ಯದರ್ಶಿ ಬಸವಣ್ಣ, ನಿರ್ದೇಶಕರಾದ ಪ್ರಭುಸ್ವಾಮಿ, ನಾಗಪ್ಪ, ನೀಲಮ್ಮ, ರಾಜಲಕ್ಷ್ಮಿ, ಮುಖಂಡರಾದ ಗುರುಶಾಂತು, ಧರ್ಮಸ್ಥಳ ಸಂಸ್ಥೆಯ ಒಕ್ಕೂಟದ ಅಧ್ಯಕ್ಷೆ ರಾಜಮ್ಮ, ಸೇವಾ ಪ್ರತಿನಿಧಿಗಳಾದ ನಾಗರಾಜು, ಶಿವು, ಎಲ್. ಬಸವಣ್ಣ ಮೊದಲಾದವರು ಇದ್ದರು.