ಕೋಲಾರ,ಜು.೨೭-ತಾಲೂಕಿನ ವೇಮಗಲ್ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿ ಗರ್ಭಿಣಿಯರು ತರಬೇತಿ ಪಡೆಯುತ್ತಿದ್ದ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕ್ಷೇಮ ವಿಚಾರಿಸಿ, ಸಚಿವರು ರೋಗಿಗಳ ಅಹವಾಲು ಕೇಳಿದಾಗ ವೇಮಗಲ್ ಆಸ್ಪತ್ರೆಯಲ್ಲಿ ಡಾ.ರವಿಕಿರಣ್ ಮತ್ತು ಡಾ.ಚಲಪತಿ ಉತ್ತಮ ಚಿಕಿತ್ಸೆ ನೀಡುತ್ತಾರೆ ಜೊತೆಗೆ ಸಿಬ್ಬಂದಿ ಮತ್ತು ಡಿ ಗ್ರೂಪ್ ನೌಕರರು ಸ್ವಂತ ಮನೆಯವರಂತೆ ನೋಡುತ್ತಾರೆ ಎಂದು ಸಾರ್ವಜನಿಕರು ಸಚಿವರಿಗೆ ತಿಳಿಸಿದರು.
ಗ್ರಾಮೀಣ ಭಾಗದ ಜನತೆಗೆ ಉತ್ತಮವಾದ ವೈಧ್ಯಕೀಯ ಸೌಲಭ್ಯಗಳು ನೀಡುತ್ತಿರುವುದು ತುಂಬಾ ಸಂತೋಷ ವಿಷಯ, ವೇಮಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ೫ ಜನ ವೈಧ್ಯಾಧಿಕಾರಿಗಳು ಇರಬೇಕು ಅದನ್ನು ಕೂಡ ಆದಷ್ಟು ಬೇಗನೆ ಕಾರ್ಯರೂಪಕ್ಕೆ ತಂದು ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆಗೆ ಸಹಕಾರ ಮಾಡುತ್ತೇವೆ, ಇದೇ ರೀತಿ ಯಾವುದೇ ತೊಂದರೆಗಳಿಲ್ಲದೆ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ಸಚಿವರು ಸಲಹೆ ಮಾಡಿದರು.
ವೇಮಗಲ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆಸ್ಪತ್ರೆ ಕಟ್ಟಡ ಸಿದ್ದವಾಗಿ ಉದ್ಘಾಟನೆಯಾಗಿ, ಯಂತ್ರೋಪಕರಣಗಳು, ಸಲಕರಣೆಗಳು ಇಲ್ಲದ ಕಾರಣ ಕೊಠಡಿಗಳು ಖಾಲಿಯಾಗಿ ಉಳಿದಿವೆ. ಜೊತೆಗೆ ಹೆಚ್ಚಿನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಮಾಡಬೇಕೆಂಬ ಮುಖಂಡರು ತಿಳಿಸಿದ ಸಮಸ್ಯೆಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಮುಂದಿನ ಬಜೆಟ್‌ನಲ್ಲಿ ಕಾರ್ಯರೂಪಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.