ಗ್ರಾಮೀಣ ಜನತೆಗೆ ಸರ್ಕಾರದ ಸೌಲಭ್ಯಗಳು ತಲುಪಿಸಿ: ಎಂ.ವೈ ಪಾಟೀಲ್ ಕರೆ

ಅಫಜಲಪುರ:ಜ.3: ಮತದಾರರು ನಮ್ಮ ಮೇಲೆ ಭರವಸೆಯನ್ನಿಟ್ಟು ನಮ್ಮನ್ನು ಜನಪ್ರತಿನಿಧಿಯನ್ನಾಗಿ ಜನಸೇವೆ ಮಾಡಲು ಗುರುತಿಸುತ್ತಾರೆ. ಹೀಗಾಗಿ ಗ್ರಾಮೀಣ ಜನತೆಗೆ ಸರ್ಕಾರದ ಸೌಲಭ್ಯಗಳು ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ಶಾಸಕ ಎಂ.ವೈ ಪಾಟೀಲ್ ಕರೆ ನೀಡಿದರು.

ಅವರು ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‍ನಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿಯಿಂದ ಏರ್ಪಡಿಸಿದ್ದ ನೂತನವಾಗಿ ಆಯ್ಕೆಯಾದ ಕಾಂಗ್ರೇಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಸನ್ಮಾನಿಸಿ ಮಾತನಾಡುತ್ತಾ, ಮೂಲಭೂತ ಸೌಕರ್ಯಗಳಿಂದ ಗ್ರಾಮೀಣ ಭಾಗದ ಪ್ರದೇಶಗಳು ವಂಚಿತವಾಗುತ್ತಿವೆ. ಹೀಗಾಗಿ ಅಲ್ಲಿನ ಗ್ರಾಮೀಣ ಜನತೆ ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಗ್ರಾಮಗಳ ಅಭಿವೃದ್ಧಿಯಾಗಬೇಕು ಎಂದ ಅವರು, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಗ್ರಾಪಂ ಚುನಾವಣೆಗಳು ದಿಕ್ಸೂಚಿಯಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿವೆ. ಹೀಗಾಗಿ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಅದರಂತೆ ಕಾನೂನಿನಲ್ಲಿ ಅನುದಾನವನ್ನು ನೇರವಾಗಿ ಬಳಕೆ ಮಾಡಿಕೊಳ್ಳಲು ರಾಷ್ಟ್ರಪತಿ, ಪ್ರಧಾನಮಂತ್ರಿ ಮುಖ್ಯಮಂತ್ರಿಗಳಿಗೂ ಚೆಕ್ ಮೇಲೆ ಸಹಿ ಮಾಡಲು ಅವಕಾಶ ಇರುವುದಿಲ್ಲ. ಆದರೆ ಗ್ರಾಪಂ ಅಧ್ಯಕ್ಷರಿಗೆ ಚೆಕ್ ಮೇಲೆ ಸಹಿ ಮಾಡಿ ಅನುದಾನವನ್ನು ಬಳಕೆ ಮಾಡಲು ಅವಕಾಶ ಇರುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿಗೊಳಿಸಿ ಎಂದು ಹೇಳಿದರು.

ಮಾಶಾಳ ಜಿಪಂ ಸದಸ್ಯ ಅರುಣಕುಮಾರ ಪಾಟೀಲ್ ಮಾತನಾಡುತ್ತಾ ತಾಲೂಕಿನ 6 ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ 37 ಗ್ರಾಪಂಗಳಲ್ಲಿ 640 ಸದಸ್ಯರ ಪೈಕಿ 384 ಜನ ಕಾಂಗ್ರೇಸ್ ಬೆಂಬಲಿತ ಸದಸ್ಯರಾಗಿದ್ದಾರೆ. ವಿಶೇಷವಾಗಿ ಯುವಕರೆ ಹೆಚ್ಚಿನ ಸಂಖ್ಯೆಯಲ್ಲಿ ಜಯಶಾಲಿಗಳಾಗಿದ್ದಾರೆ. ಹೀಗಾಗಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೂಲಕ ಗ್ರಾಮಗಳು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.

ಕಾಂಗ್ರೇಸ್‍ನ ಹಿರಿಯ ಮುಖಂಡ ಮಕ್ಬೂಲ್ ಪಟೇಲ್, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಪಂ ಸದಸ್ಯ ದಿಲೀಪ್ ಪಾಟೀಲ್ ಫರಹತಾಬಾದ, ಜಿಪಂ ಮಾಜಿ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ರಮೇಶ ನಾಟೀಕಾರ ಮಾತನಾಡುತ್ತಾ ಜನರು ನಿಮ್ಮ ಮೇಲೆ ಭರವಸೆ ಇಟ್ಟು ಚುನಾವಣೆಯಲ್ಲಿ ಗೆಲ್ಲಿಸಿರುತ್ತಾರೆ. ಹೀಗಾಗಿ ಆ ನಂಬಿಕೆಯನ್ನು ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯರು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಫರಹತಾಬಾದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ತಿರಶೆಟ್ಟಿ, ಮಹಿಳಾ ಅಧ್ಯಕ್ಷೆ ಧಾನೇಶ್ವರಿ ಪಾಟೀಲ್, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ಮುಖಂಡರಾದ ರಾಜೇಂದ್ರಗೌಡ ಪಾಟೀಲ್ ರೇವೂರ, ಎಸ್ ವಾಯ್ ಪಾಟೀಲ್, ಮಹಾಂತೇಶ ಪಾಟೀಲ್, ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ತುಕಾರಾಮಗೌಡ ಪಾಟೀಲ್, ಪಪ್ಪು ಪಟೇಲ್, ಮತೀನ್ ಪಟೇಲ್, ನಾಗೇಶ ಕೊಳ್ಳಿ, ಬಿಲ್ಲಮರಾಜ್ ಮ್ಯಾಳೇಸಿ, ಸಿದ್ದು ಸಿರಸಗಿ, ಶಿವಾನಂದ ಗಾಡಿ ಸೇರಿದಂತೆ ಇತರರು ಇದ್ದರು.