ಗ್ರಾಮೀಣ ಜನತೆಗೆ ಮೈಕ್ರೋಬಿ ಆಗ್ರೋಟೆಕ್ ನೆರವು

ಕೋಲಾರ,ಮೇ.೧೯: ಕರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಭಾಗದ ಜನರಿಗೆ ಕಳೆದ ಬಾರಿಯಂತೆ ಈ ಬಾರಿಯೂ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆ ನೆರವಿನ ಹಸ್ತ ಚಾಚಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ದಳಸನೂರು ಹೋಬಳಿಯ ಕುಪ್ಪಹಳ್ಳಿ ಗ್ರಾಮದ ನೂರಾರು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದೆ. ಕಳೆದ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿ ರೈತರಿಂದ ಹಣ್ಣು ತರಕಾರಿಗಳನ್ನು ಖರೀದಿಸಿ ನಗರ ಪ್ರದೇಶದ ಬಡ ಜನತೆಗೆ ಉಚಿತವಾಗಿ ವಿತರಿಸಲಾಗಿತ್ತು. ಈ ಬಾರಿ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಅಗತ್ಯ ಪಡಿತರಗಳನ್ನು ಹೊಂದಿದ್ದ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಆರ್.ಹುಲ್ಲುನಾಚೇಗೌಡ, ನಿರ್ದೇಶಕರಾದ ಬಿ.ತೇಜೇಶ್, ಡಾ.ವಿಕ್ರಮ್‌ಗೌಡ, ಕೆ.ಆರ್.ನಾರಾಯಣಸ್ವಾಮಿ, ಶ್ರೀ ಪ್ರಭು, ಚರಣ್ ನಾಯ್ಡು, ಕೆ.ಆರ್.ಶಂಕರೇಗೌಡ ಉಪಸ್ಥಿತರಿದ್ದರು.