ಸೈದಾಪುರ:ಜು.26:ನಮ್ಮ ಕ್ಷೇತ್ರದ ಗ್ರಾಮೀಣ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡಲು ಇಲ್ಲಿನ ಆರೋಗ್ಯ ಕೇಂದ್ರಗಳಿಗೆ, ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ನಾನು ಬದ್ಧನಾಗಿದ್ದೇನೆ ಅದರಂತೆ ನೀವುಗಳು ಪ್ರಮಾಣಿಕವಾಗಿ ಸೇವೆ ಸಲ್ಲಿಸಲು ಸಿದ್ಧರಾಗಬೇಕು ಎಂದು ನೂತನ ಶಾಸಕ ಶರಣಗೌಡ ಕಂದಕೂರು ತಿಳಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ 2022-23ನೇ ಸಾಲಿನ ಕೆಕೆಆರ್‍ಡಿಬಿಯ 1.4 ಕೋಟಿ ಅನುದಾನದಲ್ಲಿ ಶುಶ್ರೂಷಕಿಯರ ನಾಲ್ಕು ವಸತಿ ಕಟ್ಟಡದ ಕಾಮಗಾರಿಯ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಮಳೆಗಾಲ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಅನೇಕ ಸಾಂಕ್ರಮಿಕ ಖಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದರ ಬಗ್ಗೆ ಆರೋಗ್ಯ ಇಲಾಖೆಯು ಗ್ರಾಮೀಣ ಜನತೆಯಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸುವುದರೊಂದಿಗೆ ಉತ್ತಮ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಹೇಳಿದರು. ಈ ವಸತಿ ಕಟ್ಟಡ ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಬೇಕು. ಇದರ ಮೇಲ್ವಾಚರಣೆ, ಉದ್ಘಾಟನೆಗೆ ನಾನೇ ಆಗಮಿಸುತ್ತೇನೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಲೂಕ ಆರೋಗ್ಯ ಅಧಿಕಾರಿ ಡಾ.ಹಣಮಂತ್ರಾಯ, ಗ್ರಾಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಹಿರಿಯ ಮುಖಂಡ ಸಣ್ಣ ಭೀಮಶಪ್ಪ ಜೇಗರ್, ಯುವ ಮುಖಂಡ ಚಂದ್ರುಗೌಡ ಸೈದಾಪುರ, ಪ್ರಕಾಶ ನಿರೆಟ್ಟಿ, ಬನ್ನಪ್ಪ ಬೆಟ್ಟಪ್ಪನ್ನೋರ್, ರಾಜೇಶ ಉಡಪಿ, ವೆಂಕಟೇಶ ಗಡದ್, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಕಿರಣಕುಮಾರ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಉಮಾದೇವಿ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸೇರಿದಂತೆ ಇತರರಿದ್ದರು.
ಬಾಕ್ಸ್1: ಸೈದಾಪುರನ್ನು ಪಟ್ಟಣ ಪಂಚಾಯತಿ ಮಾಡುವ ಗುರಿ: ಸೈದಾಪುರ ಪಟ್ಟಣವು ದಿನದಿಂದ ದಿನಕ್ಕೆ ಅತಿ ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ, ಆರೋಗ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಮತ್ತು ಇಲ್ಲಿನ ಜನತೆ ಬಹುದಿನದ ಬೆಡಿಕೆಯಾದ ಪಟ್ಟಣ ಪಂಚಾಯತಯನ್ನಾಗಿ ಮೇಲ್ದರ್ಜೆಗೆ ಏರಿಸುವ ಗುರಿಯನ್ನು ಹೊಂದಿದ್ದೇನೆ ಎಂದು ನೂತನ ಶಾಸಕರು ಹೇಳುವ ಮೂಲಕ ಪಟ್ಟಣದ ಜನತೆಯಲ್ಲಿ ಆಶಾ ಭಾವನೆಯನ್ನು ಮೂಡಿಸಿದ್ದಾರೆ.