ಗ್ರಾಮೀಣ ಕ್ಷೇತ್ರ ಜನರಿಗೆ ನನ್ನ ಗೆಲುವು ಅರ್ಪಣೆ-ದದ್ದಲ್

ರಾಯಚೂರು,ಮೇ.೧೪- ಗ್ರಾಮೀಣ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಜಯಗಳಿಸುವುದರ ಮೂಲಕ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲು ಕಾರಣಭೂತರಾದ ಗ್ರಾಮೀಣ ಕ್ಷೇತ್ರದ ಸರ್ವ ಜನಾಂಗಕ್ಕೆ ಮತ್ತು ಕಾರ್ಯಕರ್ತರಿಗೆ ನನ್ನ ಗೆಲುವು ಅರ್ಪಿಸುತ್ತೇನೆ ಎಂದು ಪುನರ್ ಆಯ್ಕೆಯಾದ ಬಸನಗೌಡ ದದ್ದಲ್ ಅವರು ಹೇಳಿದರು.
ಅವರು ಚುನಾವಣೆಯಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕ್ಷೇತ್ರದ’ ಒಂದಿಲ್ಲ ಒಂದು ಗ್ರಾಮಕ್ಕೆ ತೆರಳಿ ಜನರ ಕಷ್ಟ, ಸಮಸ್ಯೆಗಳಲ್ಲಿ
ಭಾಗಿಯಾಗಿದ್ದೇನೆ.’ ಅಭಿವೃದ್ಧಿ ಕಾರ್ಯಗಳಲ್ಲಿ ನನ್ನನ್ನು ನಾನು ತೋಡಗಿಸಿಕೊಂಡಿದ್ದೇನೆ. ನಾನು ಅಭಿವೃದ್ಧಿ ಕಾರ್ಯಗಳಿಂದ ಹಾಗೂ ಜನರಿಂದ ಎಂದೂ ದೂರವಾಗಿಲ್ಲ ಎಂದು ಅವರು ಹೇಳಿದರು.
ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸದಾ ಬದ್ದ ಎಂದರು.
ಕ್ಷೇತ್ರದ ಜನರು ನನ್ನ ಈ ಸೇವಾ ಮನೋ ಭಾವನೆಯನ್ನು, ಸರಳತೆಯನ್ನು ಗುರುತಿಸಿ ನನ್ನನ್ನು ಪುನರಾಯ್ಕೆ ಮಾಡಿದ್ದಾರೆ. ಕ್ಷೇತ್ರದ ಜನರ ಈ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿಯಾಗಿರುವೆ.ಅವರ ಸೇವೆ ಮಾಡುವ ಮೂಲಕ ಅವರ ಋಣ ತೀರಿಸುವ ಕೆಲಸ ಮಾಡುವೆ ಎಂದು ಅವರು ಹೇಳಿದರು.
ಕ್ಷೇತ್ರದ ಸಮಗ್ರ ನೀರಾವರಿಗೆ ಪೂರಕವಾದ ಹಲವು ಯೋಜನೆಗಳು ಹಾಗೂ ಇನ್ನೂ
ಕೆಲ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಕಳೆದ ಸರಕಾರದಲ್ಲಿ ನನಗೆ ಸಹಕಾರ ಸಿಗಲಿಲ್ಲ. ಈಗ ನಮ್ಮ ಪಕ್ಷದ ಸರಕಾರವೇ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಕಾರ್ಯಾನುಷ್ಠಾನಕ್ಕೆ ಪ್ರಯತ್ನಿಸುವೆ ಎಂದು ಹೇಳಿದರು.ಈ ಕ್ಷೇತ್ರದಲ್ಲಿ ಇದುವರೆಗೂ ಯಾರು ನಿರಂತರವಾಗಿ ಎರಡು ಬಾರಿ ಗೆಲುವು ಸಾಧಿಸಿಲ್ಲ ಎನ್ನುವ ಮಾತಿದೆ. ಆದರೆ ಅದು ಸರಿಯಲ್ಲ. ಜನರ ಜೊತೆ ಉತ್ತಮ ಬಾಂಧವ್ಯ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ಜನರು ಕೈ ಬಿಡುವುದಿಲ್ಲ. ಕ್ಷೇತ್ರದಲ್ಲಿ ನಿರಂತರವಾಗಿ ಎರಡು ಬಾರಿ ಗೆಲುವು ಸಾಧಿಸಿಲ್ಲ ಎನ್ನುವ ಸಂಪ್ರದಾಯವನ್ನು ನಾನು ಮುರಿಯಲು ಜನರ ಆಶೀರ್ವಾದವೇ ಕಾರಣ ಎಂದು ಅವರು ಹೇಳಿದರು.