ಗ್ರಾಮೀಣ ಕ್ರೀಡೆ ಲಗೋರಿಯ ರೂವಾರಿ ದೊಡ್ಡಣ್ಣ ಬರೆಮೇಲುರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಸುಳ್ಯ, ನ.೧- ಗ್ರಾಮೀಣ ಕ್ರೀಡೆಯಾದ ಲಗೋರಿಯನ್ನು ರಾಜ್ಯ ಮತ್ತು ದೇಶಕ್ಕೆ ಪರಿಚಯಿಸಿ, ಅದಕ್ಕೆ ಮಾನ್ಯತೆ ನೀಡುವಂತೆ
ಮಾಡಿದ್ದ ಕ್ರೀಡಾ ಶಿಕ್ಷಕ ದೊಡ್ಡಣ್ಣ ಬರೆಮೇಲುರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಇವರು ಮಡಿಕೇರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸ್ಥಾಪಕರಾಗಿ, ಗೌಡ ಯುವಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸ್ಥಾಪಕರಾಗಿ, ಅಧ್ಯಕ್ಷರಾಗಿ, ಜಿಲ್ಲಾ ಲಗೋರಿ ಅಸೋಸಿಯೇಶನ್ ಸ್ಥಾಪಕರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಬೆಂಗಳೂರು, ಮಂಡ್ಯ ಲಗೋರಿ ಅಸೋಸಿಯೇಶನ್ ಸ್ಥಾಪಕರಾಗಿ ಹೀಗೆ ನಾನಾ ಸಂಘ ಸಂಸ್ಥೆಗಳ ಸಂಘಟಕರಾಗಿ, ಗ್ರಾಮೀಣ ಕ್ರೀಡೆಯಾದ ಲಗೋರಿಯನ್ನು ರಾಜ್ಯಕ್ಕೆ, ದೇಶಕ್ಕೆ ಪರಿಚಯಿಸಿ, ಅದಕ್ಕೆ ನಿಯಮಗಳನ್ನು ಬರೆದು ಕ್ರೀಡಾಕ್ಷೇತ್ರದ ಸಾಧನೆಯನ್ನು ಗುರುತಿಸಿ, ಈ ಬಾರಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ.
ಇವರಿಗೆ ಸಂದ ಪ್ರಶಸ್ತಿಗಳು: ಕೊಡಗು ಜಿಲ್ಲಾ ಯುವ ಪ್ರಶಸ್ತಿ, ಕೊಡಗು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಜನಪದ ಕ್ರೀಡಾ ಗೌರವ ಪ್ರಶಸ್ತಿ, ತಾಲೂಕು ಸಾಹಿತ್ಯ ಸಮ್ಮೇಳನ ಕನ್ನಡಸಿರಿ ಪ್ರಶಸ್ತಿ ಅಲ್ಲದೆ ನಾನಾ ಸಂಘಟನೆಗಳಿಂದ ಸನ್ಮಾನ ಲಭಿಸಿದೆ. ದೊಡ್ಡಣ್ಣ ಬರೆಮೇಲು ಅವರು ಪೆರಾಜೆ ಜ್ಯೋತಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಸುಳ್ಯದ ದೊಡ್ಡಣ್ಣ ಬರೆಮೇಲು ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಐವರ್ನಾಡಿನ ವಿಶ್ವನಾಥ ಪೈಯವರಿಗೆ ಪ್ರಶಸ್ತಿ ಲಭಿಸಿದೆ.