ಗ್ರಾಮೀಣ ಕ್ರೀಡೆಗಳಿಗೆ ಸಿಗಲಿ ಪ್ರೋತ್ಸಾಹ

ದೇವದುರ್ಗ,ಮಾ.೦೯- ಗ್ರಾಮೀಣ ಭಾಗದ ಕ್ರೀಡೆಗಳು ಪ್ರೋತ್ಸಾಹ ಹಾಗೂ ಆಡುವವರಿಲ್ಲದೆ ನಶಿಸುವತ್ತ ಸಾಗಿವೆ. ಹಲವು ಕ್ರೀಡೆಗಳು ಈಗಾಗಲೇ ಕಣ್ಮರೆಯಾಗಿವೆ. ಇಂಥ ಹೊತ್ತಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗಬೇಕಿದ್ದು, ಇಲ್ಲಿನ ಯುವಕರು ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದು ಶ್ಲಾಘನೀಯ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಹೋಳಿ ಹಬ್ಬದ ನಿಮಿತ್ತ ಪಟ್ಟಣದ ಇಂದಿರಾ ನಗರದಲ್ಲಿ ಏಕಲವ್ಯ ಕಬಡ್ಡಿ ಒಕ್ಕೂಟ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಕ್ರೀಡೆಗಳು ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಜಂಜಾಟದ ಬದುಕಿನಲ್ಲಿ ಸ್ವಲ್ಪ ಸಮಯ ಕ್ರೀಡೆಗೆ ಮೀಸಲಿಟ್ಟರೆ ದೇಹ ಹಾಗೂ ಮನಸ್ಸು ಕೂಡ ಸದೃಢವಾಗಿರುತ್ತದೆ. ಪ್ರತಿಯೊಬ್ಬರೂ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು.
ಆಟಗಾರರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡೆಯನ್ನು ಗೌರವಿಸಬೇಕು. ಇತ್ತೀಚೆಗೆ ಭಾರತ ಕ್ರೀಡೆಯಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ಓಲಂಪಿಕ್, ಕಾಮನ್‌ವೆಲ್ತ್ ಸೇರಿ ವಿವಿಧ ಕ್ರೀಡೆಯಲ್ಲಿ ದೇಶದ ಪ್ರದರ್ಶನ ಆಶಾದಾಯಕವಾಗಿದೆ. ಕೇಂದ್ರ ಸರ್ಕಾರ ಕೂಡ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದೆ. ಯುವಕರು ಯಾವುದೇ ಕ್ರೀಡಾಕೂಟ ಆಯೋಜನೆ ಮಾಡಿದರೂ ನಾನು ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ಎರಡು ತಂಡಗಳ ಪಂದ್ಯಕ್ಕೆ ಟಾಸ್ ಮಾಡುವ ಮೂಲಕ ಶಾಸಕ ಕೆ.ಶಿವನಗೌಡ ನಾಯಕ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಪಾಟೀಲ್, ಮುಖಂಡರಾದ ಶರಣಗೌಡ ಕೊರವಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಹೀರ್‌ಪಾಷಾ, ರಮೇಶ, ಶಿವು, ಬಸವರಾಜ ಇತರರಿದ್ದರು.