
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03: ಗ್ರಾಮೀಣ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ಅವರಿಗೆ ಅಭಿಮಾನಿಗಳು, ಗ್ರಾಮದ ಮತದಾರರು ನಿನ್ನೆ ಸಂಜೆ ತಾಲೂಕಿನ ಬೆಣಕಲ್ಲು ಗ್ರಾಮದಲ್ಲಿ ಬೆಣ್ಣೆ ತುಲಾಭಾರ ಮಾಡಿ ಅಭಿಮಾನ ಮೆರೆದಿದ್ದಾರೆ.
ಬೆಣಕಲ್ಲು ಗ್ರಾಮದಲ್ಲಿ ಅಲ್ಲಿನ ಜನತೆ ಸ್ವಾತಂತ್ರ್ಯ ಪೂರ್ವದಿಂದಲೂ ಹೈನುಗಾರಿಕೆ ನಡೆಸಿ, ಬೆಣ್ಣೆ ಉತ್ಪಾದನೆ ಮಾಡಿ ನಗರ ಪ್ರದೇಶಗಳಿಗೆ ಮಾರಾಟ ಮಾಡುತ್ತಿದ್ದರಿಂದ ಬೆಣಕಲ್ ಗ್ರಾಮ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ.
ಈ ಗ್ರಾಮದಲ್ಲಿ ಹಾಲುಮತ ಸಮಾಜದವರು ಮತ ಯಾಚನೆಗೆ ಬಂದ ನಾಗೇಂದ್ರ ಅವರಿಗೆ ಪ್ರೀತಿ, ಅಕ್ಕರೆ, ಅಭಿಮಾನದಿಂದ ತಮ್ಮ ತಮ್ಮ ಮೆನಗಳಲ್ಲಿ ಇದ್ದ ಬೆಣ್ಣೆಯನ್ನು ಡಬ್ಬಗಳಲ್ಲಿ ತಂದು ತುಲಾಭಾರ ಮಾಡಿದ್ದಾರೆ. ನಂತರ ಗ್ರಾಮದ ಜನತೆಗೆ ಅದನ್ನು ಹಂಚಿದ್ದಾರಂತೆ.
ನನ್ನ ಜೀವನದಲ್ಲಿ ಎಂದೂ ಇಂತಹ ಅಕ್ಕರೆಯನ್ನು ನೋಡಿರಲಿಲ್ಲ. ಇದೀಗ ಈ ಜನ ನನ್ನ ಮೇಲೆ ತೋರಿದ ಈ ಪ್ರೀತಿ ತುಂಬಾ ಸಂತಸ ತಂದಿದೆಂದು ನಾಗೇಂದ್ರ ಹೇಳಿದ್ದಾರೆ.