ಗ್ರಾಮೀಣ ಆರೋಗ್ಯ ಸೇವೆಗೆ ಆದ್ಯತೆ ನೀಡಲು ಕರೆ – ಡಾ.ರಮೇಶ

ನವೋದಯ ವೈದ್ಯಕೀಯ ಕಾಲೇಜು : ೧೫ ನೇ ಘಟಿಕೋತ್ಸವ ಸಮಾರಂಭ
ರಾಯಚೂರು.ಜು.೨೯- ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸೇವೆ ಅಗತ್ಯವಿದ್ದು, ಪದವಿ ಪೂರ್ಣಗೊಳಿಸಿಕೊಂಡ ನೂತನ ವೈದ್ಯರು ಗ್ರಾಮೀಣ ಜನರ ಸೇವೆಗೆ ಆದ್ಯತೆ ನೀಡುವತ್ತ ಗಮನ ಹರಿಸಲೆಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಎಂ.ಕೆ.ರಮೇಶ ಅವರು ಹೇಳಿದರು.
ಅವರಿಂದು ನವೋದಯ ವೈದ್ಯಕೀಯ ಕಾಲೇಜಿನ ೧೫ ನೇ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ಸೇವೆ ಅತ್ಯಂತ ಮಾನವಿಯ ಮತ್ತು ಅಗತ್ಯವಾದ ಸೇವೆಯಾಗಿದೆ. ಮಾನವಿಯ ಮೌಲ್ಯಗಳೊಂದಿಗೆ ಸೇವೆಯನ್ನು ನಿರ್ವಹಿಸುವ ಮೂಲಕ ಸಮಾಜಕ್ಕೆ ನೆರವಾಗುವ ಜವಾಬ್ದಾರಿ ವೈದ್ಯರ ಮೇಲಿದೆ. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ, ಆ ಮಾನವ ಸಮುದಾಯಕ್ಕೆ ಆರೋಗ್ಯಕರ ಜೀವನ ನೀಡುವ ಶಕ್ತಿ ವೈದ್ಯರದ್ದಾಗಿದೆ. ವೈದ್ಯಕೀಯ ಪದವಿ ನಂತರ ಐಎಎಸ್, ಐಪಿಎಸ್ ಹಾಗೂ ಇನ್ನಿತರ ವಿದ್ಯಾಭ್ಯಾಸದ ಕಡೆಯೂ ಗಮನ ಹರಿಸುವಂತೆ ಸಲಹೆ ನೀಡಿದ ಅವರು, ಯಾವುದೇ ಒತ್ತಡಕ್ಕೆ ಗುರಿಯಾಗದೆ, ವೈದ್ಯಕೀಯ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಬೇಕು.
ಒತ್ತಡಗಳಿಂದ ಮುಕ್ತವಾಗಲು ಕಲೆ ಮತ್ತು ಸಂಗೀತ ಆಸಕ್ತಿ ಬೆಳೆಸಿಕೊಳ್ಳಬೇಕು. ಒತ್ತಡದಲ್ಲಿ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ತೊಡಗುವುದರಿಂದ ಅನೇಕ ಮಾನಸೀಕ ಸಮಸ್ಯೆಗಳಿಗೆ ಗುರಿಯಾಗುವ ಸಾಧ್ಯತೆಗಳಿವೆ. ಅನೇಕರು ಇಂತಹ ಒತ್ತಡಗಳಿಂದ ಜೀವನ ಕಳೆದುಕೊಂಡಂತಹ ಘಟನೆಗಳು ಇವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಒತ್ತಡಮುಕ್ತರಾಗಿ ಉತ್ತಮ ವೈದ್ಯರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಕಾಲ ಕಾಲಕ್ಕೆ ವೈದ್ಯರು ಸಂಶೋಧನೆಗಳ ಉನ್ನತೀಕರಣಕ್ಕೆ ಆದ್ಯತೆ ನೀಡಬೇಕು.
ಪ್ರತಿಯೊಂದು ಬದಲಾವಣೆಯೂ ಮಾನವ ಆರೋಗ್ಯ ಸುಧಾರಣೆಗೆ ಪೂರಕವಾಗಿ ಬಳಕೆಯಾಗುವಂತೆ ವೈದ್ಯರು ತಮ್ಮ ಪ್ರತಿಭೆಯನ್ನು ರೂಢಿಸಿಕೊಳ್ಳಬೇಕು. ಅಂತರ್ಜಾಲ ಯುಗವಾದ ಇಂದಿನ ದಿನಮಾನಗಳಲ್ಲಿ ಎಲ್ಲಾ ಸಂಶೋಧನೆಗಳು ಬೆರಳು ತುದಿಯಲ್ಲಿ ಲಭ್ಯವಿವೆ. ಇವುಗಳನ್ನು ಅಧ್ಯಯನ ಮಾಡಿ, ಆಧುನಿಕ ಚಿಕಿತ್ಸಾ ವ್ಯವಸ್ಥೆಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್. ರೆಡ್ಡಿ ಅವರು ಮಾತನಾಡುತ್ತಾ, ನವೋದಯ ವೈದ್ಯಕೀಯ ಶಿಕ್ಷಣ ಸಂಸ್ಥೆ ರಾಜ್ಯದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಅನೇಕ ಱ್ಯಾಂಕ್ ಸಾಧನೆ ಮೂಲಕ ನವೋದಯ ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಇಂದು ಖ್ಯಾತಿ ಹೊಂದಿದೆ. ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸ್ಪರ್ಧಾತ್ಮಕ ಶಿಕ್ಷಣದ ಭಾಗವಾಗಿ ಕಲಿಕಾ ಪ್ರಕ್ರಿಯೆಗೆ ಆದ್ಯತೆ ನೀಡಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನವೋದಯ ಶಿಕ್ಷಣ ಸಂಸ್ಥೆ ಹೆಚ್ಚಿನ ಆದ್ಯತೆ ನೀಡಿ, ಆರೋಗ್ಯ ಸೇವೆ ಒದಗಿಸಲು ಕ್ಯಾಂಪ್‌ಗಳನ್ನು ಆಯೋಜಿಸುತ್ತಿದೆ. ಇಲ್ಲಿಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ತರಬೇತಿಗೆ ಶಿಕ್ಷಣ ಸಂಸ್ಥೆ ಪ್ರಮುಖ ಆದ್ಯತೆ ನೀಡಿದೆಂದು ಹೇಳಿದರು. ವೇದಿಕೆಯಲ್ಲಿ ರಿಜಿಸ್ಟ್ರರ್ ಟಿ.ಶ್ರೀನಿವಾಸ, ಪ್ರಾಚಾರ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.