ಗ್ರಾಮೀಣ ಅವಾಸ್ ನ್ಯಾಯ ಯೋಜನೆಗೆ ಚಾಲನೆ

ರಾಯ್ ಪುರ್, ಸೆ.೨೫- ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಆಡಳಿತರೂಡ ಕಾಂಗ್ರೆಸ್ ಸಿದ್ದತೆ ನಡೆಸಿದೆ.ಈ ಹಿನ್ನೆಲೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ‘ಗ್ರಾಮೀಣ ಅವಾಸ್ ನ್ಯಾಯ್ ಯೋಜನೆಗೆ ಚಾಲನೆ’ ನೀಡುವ ಮೂಲಕ ಮತ್ತೊಮ್ಮೆ ಜನ ಮನ ಗೆಲ್ಲಲು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಗ್ರಾಮೀಣ ಆವಾಸ್ ನ್ಯಾಯ್ ಯೋಜನೆ ಯೋಜನೆ ವಸತಿರಹಿತರಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ಮನೆ ಹೊಂದಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಗುರಿ ಹೊಂದಿದೆ.
ಬಿಲಾಸ್‌ಪುರ ಜಿಲ್ಲೆಯ ಆವಾಸ್ ನ್ಯಾಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಗ್ರಾಮೀಣ ಆವಾಸ್ ನ್ಯಾಯ ಯೋಜನೆಗೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದು ಕಾರ್ಯಕ್ರಮ ಬಿಲಾಸ್‌ಪುರ ಜಿಲ್ಲೆಯ ತಖತ್‌ಪುರ ಅಭಿವೃದ್ಧಿ ಬ್ಲಾಕ್‌ನ ಅಡಿಯಲ್ಲಿ ಪರ್ಸಾದ ಗ್ರಾಮದಲ್ಲಿ ನಡೆಯಲಿದೆ.
ಈ ಯೋಜನೆ ಮನೆಯಿಲ್ಲದ ವ್ಯಕ್ತಿಗಳಿಗೆ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುವ ಗುರಿ ಹೊಂದಿದೆ. ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮನೆ ನಿರ್ಮಾಣಕ್ಕಾಗಿ ೧,೩೦,೦೦೦ ಫಲಾನುಭವಿಗಳಿಗೆ ಮೊದಲ ಕಂತಿನ ೨೫,೦೦೦ ರೂ. ವಿತರಿಸಲಿದ್ದಾರೆ.
೧.೩೦ ಲಕ್ಷ ಫಲಾನುಭವಿಗಳಲ್ಲಿ, ೧ ಲಕ್ಷ ಜನರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಶಾಶ್ವತ ನಿರೀಕ್ಷಣಾ ಪಟ್ಟಿಯಲ್ಲಿ ಕೇಂದ್ರ ಯೋಜನೆಯ ಪ್ರಯೋಜನ ಪಡೆಯುತ್ತಿಲ್ಲ.
ಈ ವರ್ಷದ ಮೇ ತಿಂಗಳಲ್ಲಿ ಉದ್ಘಾಟನೆಗೊಂಡ ಮುಖ್ಯಮಂತ್ರಿ ನಿರ್ಮಾಣ್ ಶ್ರಮಿಕ್ ಆವಾಸ್ ಸಹಾಯತಾ ಯೋಜನೆ ಭಾಗವಾಗಿ ೫೦೦ ಫಲಾನುಭವಿಗಳ ಖಾತೆಗಳಿಗೆ ೫ ಕೋಟಿ ರೂ. ವರ್ಗಾಯಿಸಲಾಗುತ್ತದೆ.ಛತ್ತೀಸ್‌ಗಢ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟಿರುವ ನಿರ್ಮಾಣ ಕಾರ್ಮಿಕರಿಗೆ ೧ ಲಕ್ಷ ರೂಪಾಯಿಗಳ ಸಹಾಯ ಒದಗಿಸುತ್ತದೆ. ಈ ಆರ್ಥಿಕ ನೆರವು ಈ ಕಾರ್ಮಿಕರಿಗೆ ಮನೆಗಳ ನಿರ್ಮಾಣದಲ್ಲಿ ಸಹಾಯ ಮಾಡಲು ಉದ್ದೇಶಿಸಲಾಗಿದೆ.
ಛತ್ತೀಸ್‌ಗಢದ ೯೦ ಸದಸ್ಯ ಬಲದ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ೨೦೧೮ ರಲ್ಲಿ, ರಾಜ್ಯದಲ್ಲಿ ೯೦ ರಲ್ಲಿ ೬೮ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಭಾರಿ ಗೆಲುವು ಸಾಧಿಸಿತ್ತು ಬಿಜೆಪಿ ೧೬ ಸ್ಥಾನಗಳಲ್ಲಿ ಗೆಲವು ದಾಖಲಿಸಿತ್ತು.

ನೇಮಕಾತಿ ಪತ್ರ ವಿತರಣೆ:
ಬಿಲಾಸ್‌ಪುರ ಜಿಲ್ಲೆಯಲ್ಲಿ ೫೨೪.೩೩ ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಮತ್ತು ನಿರ್ಮಾಣ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಸಮಾರಂಭಗಳಲ್ಲಿ ರಾಹುಲ್ ಗಾಂಧಿ ಮತ್ತು ಭೂಪೇಶ್ ಬಾಘೆಲ್ ಭಾಗವಹಿಸಲಿದ್ದಾರೆ. ಇದೇ ವೇಳೆ ಹೊಸದಾಗಿ ನೇಮಕಗೊಂಡ ೨,೫೯೪ ಶಿಕ್ಷಕರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ.
ಛತ್ತೀಸ್‌ಗಢ ರಾಜ್ಯ ಸಾಮಾಜಿಕ ಆರ್ಥಿಕ ಸಮೀಕ್ಷೆ ೨೦೨೩ ಅನ್ನು ಈ ವರ್ಷದ ಏಪ್ರಿಲ್ ೧ ರಿಂದ ಏಪ್ರಿಲ್ ೩೦ ರ ನಡುವೆ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ನಡೆಸಲಾಗಿದ್ದು, ಇದರಲ್ಲಿ ೧೦,೭೬,೫೪೫ ಕುಟುಂಬಗಳು ವಸತಿರಹಿತ ಅಥವಾ ಕಚ್ಚಾ ಮನೆಗಳನ್ನು ಹೊಂದಿರುವುದು ಕಂಡುಬಂದಿದೆ.
ಈ ಯೋಜನೆಯಡಿ ಮನೆ ನಿರ್ಮಾಣಕ್ಕೆ ಪ್ರತಿ ಫಲಾನುಭವಿಗೆ ದೂರದ ಪ್ರದೇಶದಲ್ಲಿ ೧.೩೦ ಲಕ್ಷ ಹಾಗೂ ಬಯಲು ಪ್ರದೇಶದಲ್ಲಿ ೧.೨೦ ಲಕ್ಷ ಸಹಾಯಧನ ನೀಡಲಾಗುತ್ತದೆ.
ಈ ಯೋಜನೆಯು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ೬,೯೯,೪೩೯ ಅರ್ಹ ಫಲಾನುಭವಿಗಳಿಗೆ ಪ್ರಯೋಜನ ನೀಡುವ ಗುರಿ ಹೊಂದಿದೆ.