ಗ್ರಾಮೀಣಾ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆದಾಗ ಮಾತ್ರ ಸ್ವಾವಲಂಬಿಗಳಾಗಲು ಸಾಧ್ಯ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಅ.14:- ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುವುದರಿಂದ ಮಾತ್ರ ಭವಿಷ್ಯದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯ ಎಂದು ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯರ್ ಗಿರೀಶ್ ತಿಳಿಸಿದರು.
ಪಟ್ಟಣದ ಹರವೆ ಮಲ್ಲರಾಜಪಟ್ಟಣದಲ್ಲಿ ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ 2023ರ ಘಟಿಕೋತ್ಸವ ಕಾರ್ಯಕ್ರಮದಲ್ಲಿ 2021-22ನೇ ಸಾಲಿನಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.
ದೇಶದ ಅಭಿವೃದ್ಧಿ ಅಲ್ಲಿನ ಶಿಕ್ಷಣ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ವಿಚಾರವಂತನಾಗಿ ಸುಸಂಸ್ಕೃತನಾಗಿ ಬೆಳೆಯಲು ಆತ ಕಲಿತ ಶಿಕ್ಷಣ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನಮಾನ ಹೊಂದಲು ಹಾಗೂ ಆರ್ಥಿಕವಾಗಿ ಸ್ವಾಲಂಬನೆ ಸಾಧಿಸಲು ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇಂದಿನ ಶಿಕ್ಷಣದ ಸ್ಥಿತಿಯನ್ನು ನೋಡಿದರೆ, ಶಿಕ್ಷಣ ಗೊತ್ತು ಗುರಿ ಯಾವುದೂ ಇಲ್ಲದೆ ಅದರ ಪಯಣ ಅಂಬಿಗನಿಲ್ಲದ ನೌಕೆಯಂತಾಗಿಬಿಟ್ಟಿದೆ ಆದ್ದರಿಂದ ಆಳುವ ಸರ್ಕಾರಗಳು ಪಠ್ಯಪುಸ್ತಕಗಳ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಬಾರದು, ಆದ್ದರಿಂದ ಸರ್ಕಾರಗಳು ವಿಷಯಗಳ ಆಯ್ಕೆಯಲ್ಲಿ ದೃಡ ಸಂಕಲ್ಪ ಮಾಡಬೇಕು ಆ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದರು .
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಹೆಚ್.ಎನ್.ರವಿ ಮಾತನಾಡಿ ಕೈಗಾರಿಕಾ ತರಬೇತಿ ಪಡೆದವರಿಂದ ದೇಶ ವಿದೇಶಗಳಲ್ಲಿ ಸಾಮಥ್ರ್ಯ ಸಾಬೀತ ಪಡಿಸಲು ಅವಕಾಶ ಸಿಕ್ಕಿದೆ, ಭಾರತ ಮೊದಲಿನಿಂದಲೂ ಕೌಶಲತೆಯಲ್ಲಿ ಉನ್ನತ ಸಾಧನೆ ಮಾಡಿದೆ. ಆದ್ದರಿಂದ ವಿದ್ಯಾರ್ಥಿಗಳು ಕೌಶಲತೆ ಬೆಳೆಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು. ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಕೌಶಲತೆ, ಬುದ್ದಿವಂತಿಕೆ ಹಾಗೂ ಚಾಣಾಕ್ಷತೆ ಇಂಜಿನಿಯರ್ ಹಾಗೂ ಎಂಟಿಐ ಮಾಡಿರುವವರಿಗೂ ಇರಲ್ಲ. ಐಟಿಐ ಕೋರ್ಸ್ ಪೂರ್ಣಗೊಳಿಸಿದವರಿಗೆ ಉದ್ಯೋಗ ಅವಕಾಶ ದೊರಕುವುದರಲ್ಲಿ ಯಾವುದೇ ಅನುಮಾನ ಇಲ್ಲ. ಐಟಿಐ ಮಾಡಿರುವವರಲ್ಲಿ ಅಹಂ ಎನ್ನುವುದು ಕಡಿಮೆ. ಅವರಲ್ಲಿ ಕಲಿಯುವ ಉತ್ಸಾಹ, ಸಾಧಿಸುವ ಚಲ ಇರುತ್ತದೆ. ಕೌಶಲತೆಯಲ್ಲಿ ಇಡೀ ಪ್ರಪಂಚದಲ್ಲಿ ಭಾರತದ ಮಕ್ಕಳು ಬುದ್ಧಿವಂತರು ಎಂದು ಸಾಬೀತು ಮಾಡಿದ್ದಾರೆ. ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿ.ಎಲ್.ಸೋಮಶೇಖರ್
ಮಾತನಾಡಿ ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಎಲ್ಲ ಕಡೆ ಉತ್ತೇಜನವಿದೆ. ಇತ್ತೀಚಿನ ದಿನಗಳಲ್ಲಿ ಇಸ್ರೋ ಉಡಾವಣೆಯಲ್ಲಿ ಕೈಗಾರಿಕಾ ತರಬೇತಿ ಪಡೆದವರು ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ವೃತ್ತಿ ಶಿಕ್ಷಣ ವಿದ್ಯಾರ್ಥಿಗಳು ಕೌಶಲ್ಯವನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು ಉತ್ತಮ ವೃತ್ತಿ ಭಾಂದವರು ನಾವಾಗಬೇಕು. ತರಬೇತಿ ಪೂರ್ಣಗೊಳಿಸಿದ ನಂತರದ ಅರ್ಹತಾ ಪ್ರಮಾಣ ಪತ್ರಗಳ ವಿತರಣೆಯ ಈ ಕಾರ್ಯಕ್ರಮ ಅತಿ ಮುಹತ್ವದ್ದಾಗಿದೆ. ನಾವೆಲ್ಲರೂ ಒಂದಡೆ ಸೇರಿ ಅದ್ದೂರಿ ಸಮಾರಂಭದ ಆಯೋಜನೆ ನಮ್ಮ ಮಹತ್ವ ಹೆಚ್ಚಾಗುವಂತೆ ಮಾಡಿದೆ ಐಟಿಐ ಪೂರ್ಣಗೊಳಿಸಿದವರಿಗೆ ಉತ್ತಮ ಅವಕಾಶಗಳಿವೆ. ವೃತ್ತಿ ಕೇಂದ್ರಿತವಾದ ಇದು ಉತ್ತಮ ಸಾಧನೆಯನ್ನು ಮಾಡಲು ಅವಕಾಶವಿದೆ. ಪ್ರಮಾಣ ಪತ್ರಗಳು ನಮ್ಮ ಕೌಶಲ್ಯದ ಮಹತ್ವ ತಿಳಿಸುವಂತಿದೆ. ಇವುಗಳ ಮಹತ್ವ ಹೆಚ್ಚಾಗಬೇಕಾದರೆ ತರಬೇತಿಯಲ್ಲಿನ ಜ್ಷಾನವನ್ನು ಉತ್ತಮ ರೀತಿಯಲ್ಲಿ ಬಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ 2021-22 ನೇ ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಪ್ರಕಾಶ್ ಸಿಂಗ್, ಉಪನ್ಯಾಸಕರಾದ ಪ್ರೇಮ, ವಾಸುದೇವ್, ಕೆ.ಹೆಚ್.ಅಭಿಷೇಕ್, ಹೆಚ್.ಆರ್.ಮಂಜುನಾಥ್, ರಾಜು, ಪೂಜಾ, ಬಿ.ಕೆ.ಕಿರಣ್ ಕುಮಾರ್, ಶಕುಂತಲಾ, ಅನುಷಾ ಎಲ್.ಎನ್.ಸುಪ್ರಿತಾ, ಮಲ್ಲೇಶ್, ಅನಿತಾ ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..