ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಕೊರೊನಾ ವಾರಿಯರ್ಸ್: ಸಿಎಂ ಘೋಷಣೆ

Front page city

ಬೆಂಗಳೂರು,ಮೇ ೨೬- ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಕಂದಾಯ ಇಲಾಖೆ ಸಿಬ್ಬಂದಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದರು.
ಹಳ್ಳಿಗಳಲ್ಲಿ ಸೋಂಕು ನಿವಾರಣಾ ಸಂಬಂಧ ಆಯ್ದ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಪಿಡಿಓಗಳ ಜತೆ ವೀಡಿಯೊ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸುವುದಾಗಿ ಹೇಳಿದರು.
ಹಳ್ಳಿಗಳಲ್ಲಿ ಸೋಂಕು ನಿಗ್ರಹಕ್ಕೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಂಟೈನ್ಮೆಂಟ್ ಝೋನ್‌ಗಳನ್ನು ಮಾಡಿ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಸ್ಥಳೀಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಸೋಂಕು ನಿಗ್ರಹಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಗ್ರಾಮ ಮಟ್ಟದಲ್ಲಿ ಸೋಂಕಿತರಾಗುವವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡದೆ ಕೋವಿಡ್ ಕೇರ್ ಆರೈಕೆ ಕೇಂದ್ರಕ್ಕೆ ದಾಖಲಿಸುವಂತೆ ಸೂಚನೆ ನೀಡಿದ ಅವರು, ಸೋಂಕಿತರ ಅನಗತ್ಯ ಓಡಾಟಕ್ಕೂ ನಿರ್ಬಂಧ ಹೇರುವಂತೆ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.
ಹಳ್ಳಿಗಳಲ್ಲಿ ಕೊರೊನಾ ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು ಕೇಳಿ ಬರುತ್ತಿದೆ. ಜನರ ಮನವೊಲಿಸಿ ಕೊರೊನಾ ಪರೀಕ್ಷೆಗಳನ್ನು ಮಾಡಿ ಎಂದು ಅವರು ಹೇಳಿದರು.