ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರ ಅನ್ಯಇಲಾಖೆಗೆ ನಿಯೋಜನೆ ರದ್ದು


ಬೆಂಗಳೂರು, ಸೆ. ೧೫- ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ನಿಯೋಜನೆ ಮೇಲೆ ತೆರಳಿರುವ ನೌಕರರು ಹಾಗೂ ಅಧಿಕಾರಿಗಳ ನಿಯೋಜನೆಯನ್ನುರದ್ದುಗೊಳಿಸಿ ಮಾತೃ ಇಲಾಖೆಗೆ ವಾಪಸ್ ಕರೆಸುವ ಸಂಬಂಧ ಸರ್ಕಾರದ ಆದೇಶ ಹೊರಡಿಸುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪ ವಿಧಾನಸಭೆಯಲ್ಲಿಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಪಿಡಿಓಗಳು ಸೇರಿದಂತೆ ವಿವಿಧ ಸಿಬ್ಬಂದಿಗಳನ್ನು ಶಾಸಕರು, ಸಚಿವರುಗಳು ನಿಯೋಜನೆ ಮೇಲೆ ತಮ್ಮ ಆಪ್ತ ಸಹಾಯಕರಾಗಿ ನೇಮಕ ಮಾಡಿಕೊಂಡಿದ್ದಾರೆ. ಇದರಿಂದ ಇಲಾಖೆಯ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಇನ್ನು ಮುಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಯಾವುದೇ ನೌಕರರು ಹಾಗೂ ಅಧಿಕಾರಿಗಳನ್ನು ನಿಯೋಜನೆ ಮೇಲೆ ಕಳುಹಿಸುವುದಿಲ್ಲ ಎಂಬ ತೀರ್ಮಾನ ಮಾಡಲಾಗಿದೆ. ಹಾಗೆಯೇ ಈಗಾಗಲೇ ನಿಯೋಜನೆ ಮೇಲೆ ತೆರಳಿರುವ ಇಲಾಖೆಯ ನೌಕರುರ ಹಾಗೂ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸ್ ಕರೆಸಿಕೊಳ್ಳುವ ಸಂಬಂಧ ಆದೇಶ ಹೊರಡಿಸುತ್ತೇನೆ ಎಂದರು.
ಕೆಲ ಶಾಸಕರು ಹಾಗೂ ಸಚಿವರುಗಳು ಒಳ್ಳೆಯ ಕೆಲಸಗಾರನಿದ್ದಾನೆ ನಿಯೋಜನೆ ಮಾಡಿಕೊಡಿ ಎಂದು ಬರುತ್ತಾರೆ. ಸ್ನೇಹ ಕಾರಣದಿಂದ ಅದನ್ನು ನಿರಾಕರಿಸಲು ಸಾಧ್ಯವಾಗದೆ ನಿಯೋಜನೆ ಮಾಡಿಕೊಡಲಾಗಿತ್ತು. ಆದರೆ ಈಗ ಇಡೀ ಸದನ ಈ ನಿಯೋಜನೆಗಳನ್ನು ರದ್ದು ಮಾಡಲು ಒಪ್ಪಿಗೆ ನೀಡಿದೆ ಅದರಂತೆ ನಿಯೋಜನೆ ರದ್ದು ಮಾಡುವ ಆದೇಶ ಹೊರಿಸುತ್ತೇನೆ ಎಂದರು.
ಸಚಿವರು ಹಾಗೂ ಶಾಸಕರುಗಳು ಸಹಕರಿಸಿ ತಮ್ಮ ಬಳಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರನ್ನು ಬಿಡುಗಡೆ ಮಾಡಬೇಕು ಎಂದು ಅವರು ಹೇಳಿದರು
ನಿಯೋಜನೆ ಮೇಲೆ ತೆರಳಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರನ್ನು ಮಾತೃ ಇಲಾಖೆಗೆ ವಾಪಸ್ ಕರೆಸುವ ಆದೇಶದಲ್ಲಿ ಒಂದು ಸಮಯವನ್ನು ನಿಗದಿ ಮಾಡಿ ಆದಷ್ಟು ಶೀಘ್ರ ಎಲ್ಲರನ್ನು ಇಲಾಖಾ ಕೆಲಸಕ್ಕೆ ನಿಯುಕ್ತಿ ಮಾಡುವುದಾಗಿ ಅವರು ಹೇಳಿದರು.
ಇದಕ್ಕೂ ಮೊದಲು ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಜೆಡಿಎಸ್‌ನ ನಾಡಗೌಡ, ಶಿವಾನಂದಪಾಟೀಲ್, ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಸದಸ್ಯರು ನಿಯೋಜನೆ ಮೇಲೆ ತೆರಳಿರುವ ನೌಕರರನ್ನು ಇಲಾಖೆಗೆ ವಾಪಸ್ ಕರೆಯಿಸಿ ಎಂದು ಒತ್ತಾಯಿಸಿದ್ದರು.