ಗ್ರಾಮೀಣರ ಆರೋಗ್ಯ ಜಾಗೃತಿಗೆ ಉಚಿತ ಶಿಬಿರಗಳು ಸಹಕಾರಿ

ತುಮಕೂರು, ಜು. ೨೬- ಗ್ರಾಮೀಣ ಭಾಗದ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಮಾಜ ಸೇವಕ ರವಿಕಲ್ಯಾಣ್ ಹೇಳಿದರು.
ತುಮಕೂರು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಕ್ಯಾನ್ಸರ್ ಕೇರ್ ಯೂನಿಟ್ ವತಿಯಿಂದ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಹೆಸರಹಳ್ಳಿಯ ಶ್ರೀ ಬಸವೇಶ್ವರ ದೇವಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿ ವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲರಾದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದರು.
ತುಮಕೂರು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಕ್ಯಾನ್ಸರ್ ಕೇರ್ ಯೂನಿಟ್ ವೈದ್ಯ ವೃಂದವು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಬಡವರ, ಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರವು ಉಪಯುಕ್ತವಾಗಿದೆ ಎಂದರು.
ವೈದ್ಯ ಡಾ.ರಾಜೇಶ್ ಮಾತನಾಡಿ, ತುಮಕೂರು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಕ್ಯಾನ್ಸರ್ ಕೇರ್ ಯೂನಿಟ್ ವತಿಯಿಂದ ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಚಿಕಿತ್ಸೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ.
ಕೋವಿಡ್ ನಂತರ ಆರೋಗ್ಯ ಸೇವೆಯಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ಇಂತಹ ಉಚಿತ ಆರೋಗ್ಯ ಶಿಬಿರವನ್ನು ತಿಂಗಳಿಗೊಂದು ಮಾಡುವ ಸದುದ್ದೇಶವಿದೆ. ಆರೋಗ್ಯದಲ್ಲಿ ಮುಂದೆ ಬರಬಹುದಾದ ಸವಾಲುಗಳಿಗೆ ಇಂದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಇಂತಹ ಶಿಬಿರ ಸಹಕಾರಿಯಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಗ್ರಾಮದ ಮುಖಂಡ ತ್ಯಾಗರಾಜ್ ಮಾತನಾಡಿ, ಆರೋಗ್ಯವಾಗಿದ್ದವನೇ ನಿಜವಾದ ಶ್ರೀಮಂತ ಎಂಬ ಮಾತಿನಂತೆ ಗ್ರಾಮದ ಸಾರ್ವಜನಿಕರು ತಮ್ಮ ಕಾಯಿಲೆಗಳನ್ನು ಪರೀಕ್ಷಿಸಿಕೊಂಡು ಹೆಚ್ಚಿನ ತೊಂದರೆಗಳಿದ್ದರೆ ವೈದ್ಯರ ಸಲಹೆ ಪಡೆದು ಆರೋಗ್ಯವಾಗಿ ಸದೃಢವಾಗಬೇಕು ಎಂದರು.
ರೈತರು, ಕೂಲಿಕಾರ್ಮಿಕರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಹಿಮೋಗ್ಲೋಬಿನ್, ರಕ್ತದ ಗುಂಪು, ಸಕ್ಕರೆ ಪ್ರಮಾಣ, ಹೆಚ್‌ಬಿಎಸಿ (ಸಕ್ಕರೆ ಕಾಯಿಲೆ ಪರೀಕ್ಷೆ), ಇಸಿಜಿ ಪರೀಕ್ಷೆ, ಜನರಲ್ ಸರ್ಜನ್‌ರಿಂದ ಸಾಮಾನ್ಯ ತಪಾಸಣೆ ಮಾಡಿಸಿಕೊಂಡರು. ತುಮಕೂರು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಕ್ಯಾನ್ಸರ್ ಕೇರ್ ಯೂನಿಟ್ ವೈದ್ಯ ವೃಂದವು ಶಿಬಿರದಲ್ಲಿ ಭಾಗವಹಿಸಿ ಸೇವೆ ನೀಡಿದರು.