ಗ್ರಾಮೀಣರಲ್ಲಿ ಋತುಚಕ್ರ ಶುಚಿತ್ವ ಅರಿವು ಮೂಡಿಸಿ

ಬೀದರ್: ಆ.20:ಋತುಚಕ್ರ ಶುಚಿತ್ವದ ಬಗೆಗೆ ಗ್ರಾಮೀಣ ಮಹಿಳೆಯರಲ್ಲಿ ಅರಿವು ಮೂಡಿಸಬೇಕು ಎಂದು ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜಕುಮಾರ ಪಾಟೀಲ ನುಡಿದರು.

ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಸ್ವಚ್ಛ ಹಾಗೂ ಬಯಲು ಬಹಿರ್ದೆಸೆ ಮುಕ್ತ ಬೀದರ್ ಅಭಿಯಾನ ಅಂಗವಾಗಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಎ.ಎನ್.ಎಂ, ಆಶಾ ಮೇಲ್ವಿಚಾರಕರು ಹಾಗೂ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಋತುಚಕ್ರ ವೇಳೆ ಸ್ವಚ್ಛತೆ ಕಾಪಾಡಬೇಕು. ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಶುಚಿತ್ವದ ಮಹತ್ವ ಬಹಳ ಇದೆ. ಜಿಲ್ಲೆಯಲ್ಲಿ ಕಲುಷಿತ ಆಹಾರ ಹಾಗೂ ನೀರು ಸೇವಿಸಿ ಅನೇಕರು ಅಸ್ವಸ್ಥರಾದ ಘಟನೆ ಕಣ್ಣು ಮುಂದೆಯೇ ಇವೆ. ಹೀಗಾಗಿ ಎಲ್ಲರೂ ನೈರ್ಮಲ್ಯಕ್ಕೆ ಆದ್ಯತೆ ಕೊಡಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.

ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯು ಸ್ವಚ್ಛ ಹಾಗೂ ಬಯಲು ಬಹಿರ್ದೆಸೆ ಮುಕ್ತ ಬೀದರ್ ನಿರ್ಮಾಣಕ್ಕೆ ಅಭಿಯಾನ ನಡೆಸುತ್ತಿದೆ. ಸಮುದಾಯದಲ್ಲಿ ನಿರಂತರ ಸ್ವಚ್ಛತೆ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ಋತುಚಕ್ರ ಮಹಿಳೆಯರಲ್ಲಿನ ಸಹಜ ಪ್ರಕ್ರಿಯೆಯಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಈ ಕುರಿತು ತಿಳಿವಳಿಕೆ ನೀಡಬೇಕು. ಸ್ವಚ್ಛ ಗ್ರಾಮಗಳ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಬೀದರ್ ತಾಲ್ಲೂಕು ಆರೋಗ್ಯಾಧಿಕಾರಿ ಸಂಗಾರೆಡ್ಡಿ ಹೇಳಿದರು.

ಎನ್.ಎಚ್.ಎಂ. ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಿವಶಂಕರ ಬೆಳಮಗಿ ಮಾತನಾಡಿ, ಗ್ರಾಮ ನೈರ್ಮಲ್ಯ ಸಮಿತಿ ಸದಸ್ಯರು ಗ್ರಾಮೀಣ ಭಾಗದ ಮಹಿಳೆಯರಿಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಸ್ವಚ್ಛ ಬೀದರ್‍ಗೆ ಶಾಂತೀಶ್ವರಿ ಸಂಸ್ಥೆ ನಡೆಸುತ್ತಿರುವ ಅಭಿಯಾನ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಲೆಕ್ಕ ಸಹಾಯಕ ಪ್ರವೀಣ್ ಸ್ವಾಮಿ ನುಡಿದರು.

ಸ್ವಚ್ಛ ಭಾರತ ಮಿಷನ್ ಸಮಾಲೋಚಕಿ ಮಂಜುಳಾ, ಘನ, ದ್ರವ ತ್ಯಾಜ್ಯ ನಿರ್ವಹಣೆ, ಶೌಚಾಲಯಗಳ ಸಮರ್ಪಕ ಬಳಕೆ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಶಂಕರೆಪ್ಪ ಬೊಮ್ಮಾ, ಡಾ. ವಿಜಯಕುಮಾರ, ಡಾ. ಆಕಾಶ್, ಡಾ. ಸತೀಶ್, ಡಾ. ಸುಶೀಲ್, ಡಾ ರೇಣುಕಾ, ಡಾ. ಸೊಹೇಲ್, ಆರೋಗ್ಯ ಇಲಾಖೆ ಅಧಿಕಾರಿಗಳಾದ ಓಂಕಾರ ಮಲ್ಲಿಗೆ, ಸಂಗೀತಾ, ಸುಷ್ಮಿತಾ, ಅನಿಲ್ ಚತುರೆ, ರಶೀದ್, ರಾಘವೇಂದ್ರ, ರಾಮರಾವ್, ಭೂಷಣ, ರಾಜಶೇಖರ, ರಹೀಮ್ ಪಟೇಲ್, ಶೇಖ್ ಅಬ್ದುಲ್ ಇದ್ದರು.