ಗ್ರಾಮಾಯಣಕ್ಕೆ ಸರಿದ ತೆರೆ ಹೊರಬಿದ್ದ 233 ಸ್ಥಾನಗಳ ಚುನಾವಣಾ ಫಲಿತಾಂಶ

ಹೊಸಪೇಟೆ ಡಿ 31 : 2020ರ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ಪೂರ್ಣಗೊಂಡು 13 ಕ್ಷೇತ್ರಗಳ ಅಭ್ಯರ್ಥಿಗಳು ಗೆಲುವಿನ ನಗೆಬೀರಿದರು.
ತಾಲೂಕಿನ 13 ಗ್ರಾಮಪಂಚಾಯತಿಗಳ ಚುನಾವಣಾ ಮತ ಎಣಿಕೆ ಕಾರ್ಯ ಬುಧವಾರ ಬೆಳಿಗ್ಗೆ 07ಗಂಟೆಯಿಂದ ಆರಂಭವಾಗಿತ್ತು. ಚುನಾವಣೆಗೆ ಸ್ಪರ್ಧಿಸಿದ್ದ ವಿವಿಧ ಗ್ರಾಪಂ ಅಭ್ಯರ್ಥಿಗಳು ಮತ್ತು ಅಪಾರ ಬೆಂಬಲಿಗರು ಬೆಳಗಿನ ಜಾವವೇ ಮತ ಎಣಿಕೆ ಕೇಂದ್ರದ ಬಳಿ ಜಮಾಯಿಸಿದ್ದರು.
ಡಿ.22ರಂದು ತಾಲೂಕಿನ ನಾಗೇನಹಳ್ಳಿ, ಮಲಪನಗುಡಿ, ಹಂಪಿ, ಗಾದಿಗನೂರು, ಬುಕ್ಕಸಾಗರ, ಪಾಪಿನಾಯಕನಹಳ್ಳಿ, ಬೈಲುವದ್ದೀಗೇರಿ, ಡಣಾನಾಯಕನ ಕೆರೆ, ಜಿ.ನಾಗಲಾಪುರ, ಡಾಣಾಪುರ, ಕಲ್ಲಹಳ್ಳಿ, ಚಿಲಕನಹಟ್ಟಿ ಹಾಗೂ ಹೊಸೂರು ಒಟ್ಟು 13 ಗ್ರಾಮಪಂಚಾಯತಿಯ 84 ಕ್ಷೇತ್ರಗಳ 233 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 653 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಮತಪತ್ರಗಳ ಮುಖಾಂತರ ಮತದಾನ ನಡೆದಿರುವ ಕಾರಣ ಫಲಿತಾಂಶ ತಡವಾಗಿ ಪ್ರಕಟವಾಗಿತ್ತು.
ಮತ ಎಣಿಕೆ ನಿಮಿತ್ತ 144 ನಿಷೇಧಾಜ್ಞೆ ಜಾರಿಯಲ್ಲಿದ್ದು, ಗುರುವಾರದವರೆಗೂ ಮದ್ಯ ಸರಬರಾಜು, ಮಾರಾಟವನ್ನು ನಿಷೇಧಿಸಲಾಗಿದೆ.
ತಾಲೂಕಿನ ಎಲ್.ಎಫ್.ಎಸ್ ಶಾಲೆಯಲ್ಲಿ ಯೋಜಿತವಾಗಿದ್ದ ಮತ ಎಣಿಕೆ ಕಾರ್ಯವು 06 ಕೊಠಡಿಯ 24 ಟೇಬಲನಲ್ಲಿ ನಡೆಯಿತು. ಮತ ಎಣಿಕೆ ಕಾರ್ಯದಲ್ಲಿ 26 ಮೇಲ್ವಿಚಾರಕರು ಹಾಗೂ 50 ಸಹಾಯಕರನ್ನು ನೇಮಿಸಲಾಗಿದೆ.
ಮತ ಎಣಿಕೆ ಸುತ್ತಲೂ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿತ್ತು. ಮತ ಎಣಿಕೆ ಕೇಂದ್ರದ ಸುತ್ತ 200ಮೀ ನಿಷೇಧಾಜ್ಞೆ ಹೊರಡಿಸಲಾಗಿದೆ. ತಾಲೂಕಿನ ಉಸ್ತುವಾರಿಯಾಗಿ ಡಿ.ಎಸ್.ಪಿ ಸೇರಿದಂತೆ ಸಿ.ಪಿ.ಐ, ಪಿ.ಎಸ್.ಐ ಹಾಗೂ ಇತರೆ ಸಿಬ್ಬಂದಿಗಳನ್ನು ಹಾಗೂ ಕೆ.ಎಸ್.ಆರ್.ಪಿ, ಡಿ.ಎಆರ್ ಪಾರ್ಟಿಗಳನ್ನು ಬದ್ರತೆಗಿದ್ದರು. ಈ ಬಾರಿ ಯಾವುದೇ ವಿಜಯೋತ್ಸವ, ಮೆರವಣಿಗೆಗೆ ಅವಕಾಶ ಇಲ್ಲದ ಕಾರಣ ಅಭ್ಯರ್ಥಿಗಳು ತಮ್ಮ ಗೆಲುವನ್ನು ಸಂಭ್ರಮಿಸದೇ ಎಣಿಕಾ ಕೇಂದ್ರದಿಂದ ನಿರ್ಗಮಿಸಿದ ನಂತರ ಬೆಂಬಲಿಗರು ಕೇಕೆ ಹಾಕಿ, ಹಾರ ಮುಡಿಸುತ್ತಾ ಸಂಭ್ರಮಿಸಿದರು.
ನೂಕಟ; ಡಿವೈಎಸ್ಪಿಯಿಂದ ಕಪಾಳಮೋಕ್ಷ: ನೆರೆದಿದ್ದ ಜನಸ್ತೋಮದಲ್ಲಿ ನೂಕಾಟ ಉಂಟಾಯಿತು. ಗುಂಪನ್ನು ಚದುರಿಸಲು ಸ್ಥಳದಲ್ಲಿದ್ದ ಪೊಲೀಸರು ಲಘುಲಾಠಿ ಪ್ರಯೋಗ ನಡೆಸಿದರು.
ಈ ವೇಳೆ ಪೊಲೀಸರೊಂದಿಗೆ ವಾದಕ್ಕಿಳಿದ ವ್ಯಕ್ತಿಯೋರ್ವನನ್ನು ಡಿವೈಎಸ್ಪಿ ರಘುಕುಮಾರ್ ಕಪಾಳಮೋಕ್ಷ ಮಾಡಿ ಬಂಧಿಸಿದರು.
ಒಂದು ಮತ ಅಂತರದಿಂದ ಗೆಲುವು:
ಚಿಲಕನಹಟ್ಟಿ ಗ್ರಾಪಂ ತಾಳೆಬಸಾಪುರ ತಾಂಡಾ ಕ್ಷೇತ್ರದ ಅಭ್ಯರ್ಥಿ ಹಂಪಿಬಾಯಿ ಕೇವಲ ಒಂದು ಮತದ ಅಂತರದಿಂದ ಜಯಸಾಧಿಸಿದ್ದಾರೆ.
ಹಂಪಿಬಾಯಿ 191 ಮತ ಪಡೆದರೆ ಎದುರಾಳಿಯಾಗಿದ್ದ ಶೈಲಜಾ ಬಾಯಿಯು 190 ಮತ ಪಡೆದು ಒಂದು ಮತದಿಂದ ಹಿನ್ನಡೆ ಅನುಭವಿಸಿದ್ದಾರೆ.
ಮಂಗಳಮುಖಿ ಗೆಲುವು: ಕಲ್ಲಹಳ್ಳಿ ಗ್ರಾಪಂಯ ರಾಜಾಪುರದ ಮತ ಕ್ಷೇತ್ರದಿಂದ ಸುಧಾ ಎಂಬ ಮಂಗಳಮುಖಿ ಗೆಲುವು ಸಾಧಿಸಿದ್ದಾರೆ.
ಒಟ್ಟು 622 ಮತ ಗಳಿಸಿರುವ ಸುಧಾ 491 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಗೈದಿದ್ದಾರೆ.
ಗ್ರಾಪಂ ಸ್ಥಾಪನೆಯಾಗಿ 26 ವರ್ಷಗಳ ನಂತರ ನಡೆದ ಮೊದಲ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಕಲ್ಲಹಳ್ಳಿ ಗ್ರಾಪಂ ಸ್ಥಾಪನೆಯಾದಾಗಿನಿಂದ ಕೇವಲ ಅವಿರೋಧ ಆಯ್ಕೆ ಕಾರ್ಯನಡೆದಿತ್ತು. ಮೊದಲ ಭಾರಿ ಕಲ್ಲಹಳ್ಳಿ ಗ್ರಾಪಂ ಚುನಾವಣೆಯಲ್ಲಿ ಹಣಾಹಣಿ ನಡೆದಿತ್ತು. ರಾಜಾಪುರದ 3 ಮತಕ್ಷೇತ್ರಗಳಿಗೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಅಲ್ಲಲ್ಲಿ ವಹಿವಾಟು ಜೋರು: ಮತ ಎಣಿಕೆಯ ಪ್ರದೇಶದಲ್ಲಿ ನೆರೆದಿದ್ದ ಅಸಂಖ್ಯಾತ ಜನರ ನಡುವೆ ಅಲ್ಲಲ್ಲಿ ಐಸ್ ಕ್ರೀಮ್, ತಿಂಡಿ ತಿನಿಸುಗಳ ವಹಿವಾಟಿನ ಜೊತೆಗೆ ಹೂವಿನ ಹಾರ ವ್ಯಾಪಾರಿಗಳು ಸಹ ಭರ್ಜರಿ ಮಾರಾಟದಲ್ಲಿ ನಿರತವಾಗಿದ್ದು ಕಂಡುಬಂದಿತು.
ಬಿರುಸಿನಿಂದ ಕೂಡಿದ್ದ ಈ ಬಾರಿಯ ಚುನಾವಣೆ ಸೋಲು ಗೆಲುವು ಘಟ್ಟಗಳ ಏರಿಳಿತವನ್ನು ಕಂಡಿತು.