ಗ್ರಾಮಾಂತರ ಭಾಗÀಗಳಲ್ಲೂ ಕೋವಿಡ್ ಮುನ್ನೆಚ್ಚರಿಕೆ ಕ್ರಮ

ಚಾಮರಾಜನಗರ, ಏ26- ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚನೆ ನೀಡಿದರು.
ಗುಂಡ್ಲುಪೇಟೆ ತಾಲೂಕಿಗೆ ಭೇಟಿ ನೀಡಿ ಕೋವಿಡ್ ನಿರ್ವಹಣೆ ಸಂಬಂಧ ಅನುಷ್ಟಾನ ಕ್ರಮಗಳ ಪರಾಮರ್ಶೆ ನಡೆಸಿದ ಜಿಲ್ಲಾಧಿಕಾರಿಯವರು ನಗರದ ಪ್ರವಾಸಿಮಂದಿರದಲ್ಲಿ ಕೋವಿಡ್ ನಿಯಂತ್ರಣ ಕುರಿತು ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಆರಂಭದಲ್ಲಿ ಪಟ್ಟಣ ನಗರ, ಪ್ರದೇಶಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಕೋವಿಡ್ ಸೋಂಕು ಪ್ರಕರಣಗಳು ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕವಾಗಿ ವರದಿಯಾಗುತ್ತಿವೆ. ಹೀಗಾಗಿ ಗ್ರಾಮಾಂತರ ಪ್ರದೇಶಗಳಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳೊಂದಿಗೆ ಗ್ರಾಮೀಣ ಜನರಲ್ಲಿ ಕೋವಿಡ್ ನಿಯಂತ್ರಣ ಕುರಿತು ವಹಿಸಬೇಕಿರುವ ಮುಂಜಾಗ್ರತಾ ಕ್ರಮಗಳ ಪಾಲನೆ ಬಗ್ಗೆ ಅರಿವು ಉಂಟು ಮಾಡಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕೊರೊನಾ ಹರಡದಂತೆ ತೆಗೆದುಕೊಳ್ಳಬೇಕಿರುವ ಸುರಕ್ಷತಾ ವಿಧಾನಗಳನ್ನು ಅನುಸರಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕುರಿತು ಗ್ರಾಮಾಂತರ ಭಾಗಗಳಲ್ಲಿ ಹೆಚ್ಚು ತಿಳಿವಳಿಕೆ ನೀಡಬೇಕು. ಮುನ್ನೆಚ್ಚರಿಕೆ ಸಂಬಂಧ ಆದೇಶ ಪಾಲನೆ ಮಾಡದೇ ಇರುವವರ ವಿರುದ್ಧ ದಂಡ ಮತ್ತಿತರ ನಿಯಮಾನುಸಾರ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸೋಂಕು ದೃಢಪಟ್ಟ ಪ್ರಕರಣಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಲಾಗುವವರನ್ನು ತಡ ಮಾಡದೇ ಗಂಟಲು ಮಾದರಿ ದ್ರವ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಸಂಪರ್ಕಿತರನ್ನು ಕರೆತರಲು ವಾಹನಗಳನ್ನು ಬಳಸಿಕೊಳ್ಳಬೇಕು. ಇದಕ್ಕಾಗಿಯೇ ಪ್ರತಿ ತಾಲೂಕಿಗೂ ಪ್ರತ್ಯೇಕ ವಾಹನಗಳನ್ನು ನಿಯೋಜನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್ ಸೋಂಕು ಲಕ್ಷಣಗಳು ಕಾಣಿಸಿಕೊಂಡವವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಲು ಶಿಫಾರಸು ಮಾಡಬೇಕು. ಈ ಬಗ್ಗೆ ಖಾಸಗಿ ಕ್ಲಿನಿಕ್‍ಗಳ ವೈದ್ಯರಿಗೂ ಸಭೆ ಕರೆದು ಸೂಕ್ತ ಮಾರ್ಗದರ್ಶನ ಮಾಡಬೇಕು. ರೋಗಲಕ್ಷಣ ಹೊಂದಿರುವವರನ್ನು ಆರಂಭದಲ್ಲಿಯೇ ಆಸ್ಪತ್ರೆಗಳಿಗೆ ಕಳುಹಿಸಿ ತಪಾಸಣೆ ಮಾಡುವುದರಿಂದ ಆರೊಗ್ಯ ಪರಿಸ್ಥಿತಿ ಗಂಭೀರಗೊಂಡ ಬಳಿಕ ಎದುರಾಗುವ ಅಪಾಯವನ್ನು ತಪ್ಪಿಸಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಹೀಗಾಗಿ ತಾಲೂಕು ಆರೋಗ್ಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಈಗಾಗಲೇ ಸ್ಥಳೀಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರ ಆರೈಕೆ ಬಗ್ಗೆ ಯಾವುದೇ ನಿರ್ಲಕ್ಷ್ಯ ವಹಿಸಬಾರದು. ಔಷಧ, ಅಮ್ಲಜನಕ, ಹಾಸಿಗೆಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡುವಲ್ಲಿ ಯಾವುದೇ ಲೋಪವಾಗಬಾರದು ಎಂದರು. ಕೋವಿಡ್ ಲಸಿಕೆಯನ್ನು ಅದಷ್ಟು ಆಯಾ ಭಾಗದಲ್ಲೇ ಜನತೆ ಪಡೆದುಕೊಳ್ಳಲು ಅನುಕೂಲ ಕಲ್ಪಿಸಬೇಕಿದೆ. ಪಟ್ಟಣ, ನಗರ ಪ್ರದೇಶಗಳಲ್ಲಿ ಈಗಾಗಲೇ ಇರುವ ಲಸಿಕಾ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ ಇನ್ನಷ್ಟು ಲಸಿಕಾ ಕೇಂದ್ರಗಳನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಇದೇ ವೇಳೆ ಹಂಗಳದಲ್ಲಿ ಕುಡಿಯುವ ನೀರಿಗೆ ಉಂಟಾಗಿರುವ ತೊಂದರೆ ನೀಗಿಸಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಶಾಶ್ವತವಾಗಿ ನೀರು ಒದಗಿಸುವ ಕಾರ್ಯಕ್ಕೆ ಪ್ರವೃತ್ತರಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ತಹಶೀಲ್ದಾರ್ ಸಿ.ಜಿ. ರವಿಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಎಸ್. ರವಿಕುಮಾರ್, ಪೊಲೀಸ್ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ, ಸಬ್‍ಇನ್ಸ್‍ಪೆಕ್ಟರ್ ಜೆ. ರಾಜೇಂದ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಂಗರಾಜು, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.