ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ ಮತ್ತೆ ಬಲಿಷ್ಠವಾಗುತ್ತಿದೆ: ಸಲೀಂ


ಮಂಗಳೂರು, ಜ.೫- ಮುಂಬರುವ ಉಪ ಚುನಾವಣೆ, ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದಾರೆ. ಅದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ರಾಜ್ಯದ ನಾಲ್ಕು ವಿಭಾಗಗಳಲ್ಲಿ ನಡೆಯಲಿರುವ ಪ್ರತಿನಿಧಿಗಳ ‘ಸಂಕಲ್ಪ ಸಮಾವೇಶ’ದಲ್ಲಿ ಸೂಕ್ತ ಕಾರ್ಯತಂತ್ರಗಳನ್ನು ರೂಪಿಸಲಾಗುವುದು ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ನಡೆಯಲಿರುವ ರಾಜ್ಯದ ಮೊದಲ ಪ್ರತಿನಿಧಿ ಸಮಾವೇಶದ ಸಿದ್ಧತೆ ಪರಿಶೀಲನೆಗೆ ಆಗಮಿಸಿದ ಅವರು ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಗ್ರಾಪಂ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಹಣ ಬಳಕೆ, ಅಧಿಕಾರ ದುರುಪಯೋಗ ಮಾಡಿದರೂ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಬೆಂಬಲಿಗ ಅಭ್ಯರ್ಥಿಗಳನ್ನು ಜನತೆ ಗೆಲ್ಲಿಸಿದ್ದಾರೆ. ಇದರಿಂದ ಬಿಜೆಪಿಯವರು ಭ್ರಮನಿರಸಗೊಂಡಿದ್ದಾರೆ. ಈ ಸರಕಾರ ೨ ಸಾವಿರ ಕೋಟಿ ಹಗರಣ ಮಾಡಿದೆ ಎಂದು ಆರೋಪಿಸಿದ ಅವರು, ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ ಮತ್ತೆ ಸದೃಢವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ೪ ಕಡೆಗಳಲ್ಲಿ ಸಂಕಲ್ಪ ಸಮಾವೇಶ ಮಾಡಿ ದೀರ್ಘ ಚರ್ಚೆ ನಡೆಸಿ, ರಣ ನೀತಿ ರೂಪಿಸುತ್ತೇವೆ ಎಂದರು. ಪಕ್ಷ ಸಂಘಟನೆ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯದ ವಿರುದ್ಧ ಹೋರಾಟ, ಜನಜಾಗೃತಿಯ ಸಂಕಲ್ಪದ ಉದ್ದೇಶದಿಂದ ಜ.೬ರಂದು ಮೈಸೂರು ವಿಭಾಗದ ಬಂಟ್ವಾಳದಲ್ಲಿ, ೮ರಂದು ಬೆಂಗಳೂರು ವಿಭಾಗದ ಬೆಂಗಳೂರು ಗ್ರಾಮಾಂತರದಲ್ಲಿ, ೧೧ರಂದು ಬೆಳಗಾವಿ ವಿಭಾಗದ ಹುಬ್ಬಳ್ಳಿ, ೧೮ರಂದು ಕಲಬುರ್ಗಿ ವಿಭಾಗದ ಕಲಬುರಗಿಯಲ್ಲಿ ಸಂಕಲ್ಪ ಸಮಾವೇಶ ಜರುಗಲಿದೆ. ಈ ಎಲ್ಲ ಸಭೆಗಳಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಕಾರ್ಯಾಧ್ಯಕ್ಷರು, ಮುಖಂಡರು ಭಾಗವಹಿಸಲಿದ್ದಾರೆ. ಈ ಸಮಾವೇಶಗಳ ಬಳಿಕ ರಾಜ್ಯ ಸರ್ಕಾರದ ಭ್ರಷ್ಟಾಚಾರ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಡ್ರಗ್ಸ್ ಮಾಫಿಯಾ, ರೈತವಿರೋಧಿ ಕಾನೂನುಗಳ ವಿರುದ್ಧ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಲೀಂ ಅಹಮ್ಮದ್ ಹೇಳಿದರು. ಸಂಕಲ್ಪ ಸಮಾವೇಶ ಬೆಳಗ್ಗೆ ೧೧ ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ೧೧.೩೦ರಿಂದ ಗೋಷ್ಠಿ ಆರಂಭವಾಗಲಿದೆ. ೧೧.೩೦ರಿಂದ ೨ ಗಂಟೆಯವರೆಗೆ ವಿಭಾಗ ಮಟ್ಟದಲ್ಲಿ ಬರುವ ಎಲ್ಲ ಬ್ಲಾಕ್, ಜಿಲ್ಲಾಧ್ಯಕ್ಷರೊಂದಿಗೆ ಚರ್ಚೆ, ೨.೩೦ರಿಂದ ೪.೩೦ರವರೆಗೆ ಶಾಸಕರು, ಮಾಜಿ ಶಾಸಕರು, ಹಿಂದಿನ ಚುನಾವಣಾ ಅಭ್ಯರ್ಥಿಗಳೊಂದಿಗೆ ಸಮಾವೇಶ, ಸಂಜೆ ೪ರಿಂದ ೫ರವರೆಗೆ ಕೆಪಿಸಿಸಿ ಮಾಜಿ ಪದಾಧಿಕಾರಿ ಗಳೊಂದಿಗೆ ಚರ್ಚೆ, ೫.೧೫ರಿಂದ ೫.೪೫ರವರೆಗೆ ಮುಂಚೂಣಿ ಘಟಕಗಳ ಮುಖಂಡರೊಂದಿಗೆ ಚರ್ಚೆ ನಡೆದು ಕೊನೆಗೆ ೭.೪೫ಕ್ಕೆ ಪಕ್ಷದ ಹಿರಿಯ ಮುಖಂಡರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಅವರು ವಿವರಿಸಿದರು. ರಾಜ್ಯದ ಪ್ರತಿ ಗ್ರಾಪಂ ಮಟ್ಟದಲ್ಲಿ ಈ ಬಾರಿ ನೂತನವಾಗಿ ೨೫ ಮಂದಿ ಪದಾಧಿಕಾರಿಗಳನ್ನೊಳಗೊಂಡ ಪಕ್ಷದ ಸಮಿತಿಗಳನ್ನು ಜ.೨೫ರೊಳಗೆ ರಚಿಸಲು ಉದ್ದೇಶಿಸಲಾಗಿದೆ. ಜತೆಗೆ ವಾರ್ಡ್ ಸಮಿತಿಗಳಿಗೆ ಆಯ್ಕೆಯೂ ನಡೆಯಲಿದೆ. ಇವರಡು ಸಮಿತಿಗಳ ರಚನೆಯ ಬಳಿಕ ಬೂತ್ ಸಮಿತಿಗೆ ಆಯ್ಕೆ ನಡೆಯಲಿದೆ. ಈ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ತರಬೇತಿ ನೀಡಿ ಕೇಡರ್‌ಗಳಾಗಿ ರೂಪಿಸಲಾಗುವುದು ಎಂದು ಸಲೀಂ ಅಹ್ಮದ್ ತಿಳಿಸಿದರು. ವಿಧಾನ ಪರಿಷತ್ ಉಪಾಧ್ಯಕ್ಷ ಧರ್ಮೇಗೌಡ ಆತ್ಮಹತ್ಯೆ ಪ್ರಕರಣ ನಿಜಕ್ಕೂ ನೋವು ತಂದಿದೆ. ಅನಾಗರಿಕರರಂತೆ ಬಿಜೆಪಿ ನಾಯಕರು ವರ್ತಿಸಿದ್ದು, ಈ ಅನಾಹುತಕ್ಕೆ ಅವರೇ ಕಾರಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಭಾಸ್ಕರ್ ಕೆ., ಮುಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಮುಖಂಡರಾದ ಜಿ.ಎ. ಬಾವ, ಸದಾಶಿವ ಉಳ್ಳಾಲ್, ಸವಾದ್ ಸು?ಯ, ಟಿ.ಎಂ. ಶಹೀದ್ ಉಪಸ್ಥಿತರಿದ್ದರು.