ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಕ್ರಮವಹಿಸಿ: ಕೆ.ಎಂ.ಗಾಯತ್ರಿ

ಸಂಜೆವಾಣಿ ನ್ಯೂಸ್
ಮೈಸೂರು: ಏ.05:- ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀಮತಿ ಕೆ.ಎಂ.ಗಾಯಿತ್ರಿ ಅವರು ವೀಡಿಯೋ ಸಂವಾದದ ಮೂಲಕ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆಸಿದ ವೀಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಮುಂದಿನ ಹದಿನೈದು ದಿನಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳ ವಿವರ ಪಡೆದು, ಸಮಸ್ಯೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ದೇಶನ ನೀಡಿದರು.
ಕೊಳವೆಬಾವಿಗಳ ನೀರಿನ ಇಳುವರಿಯ ಮಾಹಿತಿ ಪಡೆಯಲಾಯಿತು. ಸಮರ್ಪಕವಾಗಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಸೂಚಿಸಲಾಯಿತು. ನೀರಿನ ಮೂಲದ ಪರೀಕ್ಷೆಯನ್ನು ನಿಯಮಿತವಾಗಿ ನಡೆಸುವುದರ ಜೊತೆಗೆ, ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಕೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೂಚಿಸಿದರು.
ಗ್ರಾಮೀಣ ಭಾಗದಲ್ಲಿರುವ ಕೊಳವೆಬಾವಿಗಳ ಇಳುವರಿಯನ್ನು ಪರೀಕ್ಷೆ ಮಾಡಿಸಿ ಹಾಗೂ ಸಾರ್ವಜನಿಕರಿಗೆ ಪೂರೈಕೆ ಮಾಡುವ ಕುಡಿಯುವ ನೀರಿನ ಗುಣಮಟ್ಟವನ್ನು ಎಫ್.ಟಿ.ಕೆ ಕಿಟ್ ಮೂಲಕ ಪರಿಶೀಲಿಸಿ ವರದಿಯನ್ನು ಸಂಗ್ರಹಿಸಿಟ್ಟುಕೊಳ್ಳುವoತೆ ನಿರ್ದೇಶನ ನೀಡಿದರು.
ಬೇಸಿಗೆ ಪ್ರಾರಂಭವಾಗಿರುವುದರಿoದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಬೇಕೆಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರು ಸ್ವೀಕರಿಸಲು ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ 24/7 ಕಂಟ್ರೋಲ್ ರೂಮ್ ಕಾರ್ಯ ನಿರ್ವಹಿಸುತ್ತಿದ್ದು, ದೂರು ದಾಖಲಿಸಲು ಕರೆ ಮಾಡಬೇಕಾದ ದೂರವಾಣಿ ಸಂ:0821-2526355 ಆಗಿರುತ್ತದೆ. ಇದರ ಸದ್ಬಳಕೆ ಮಾಡಿಕೊಳ್ಳುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾ.ಪಂ., ಗ್ರಾ.ಪಂ.ಗಳಲ್ಲಿ ವ್ಯಾಪಕ ಪ್ರಚಾರಮಾಡಲು ಕ್ರಮವಹಿಸುವಂತೆ ಎಲ್ಲಾ ಇಒ ಮತ್ತು ಪಿಡಿಒಗಳಿಗೆ ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ಮ.ನರೇಗಾ ಯೋಜನೆ ಕುರಿತು ?ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನದಡಿ ಅರಿವು ಮೂಡಿಸಲು ಕ್ರಮವಹಿಸಬೇಕು. ಮ.ನರೇಗಾ ಯೋಜನೆಯಡಿ ಉದ್ಯೋಗ ಸೃಜನೆ ಮಾಡುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸುವಂತೆ ಸೂಚನೆ ನೀಡಿದರು.
ಎಲ್ಲಾ ತಾಲ್ಲೂಕುಗಳಲ್ಲಿ ಸ್ವೀಪ್ ಕಾರ್ಯಕ್ರಮದಡಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಬೇಕು. ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯವಿರುವಿಕೆಯನ್ನು ಪರಿಶೀಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ(ಅಭಿವೃದ್ಧಿ) ಜಗನ್ನಾಥ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ರಂಜಿತ್, ಹೆಚ್.ಡಿ.ಕೋಟೆ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಧರಣೀಶ್ ಸೇರಿದಂತೆ ಇತರರು ಹಾಜರಿದ್ದರು.