ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಯ ಪ್ರಚಾರಾಂದೋಲನ

ತುಮಕೂರು, ನ. ೧೫- ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಡಿ.ಸಿ. ಗೌರಿಶಂಕರ್ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸುಮಾರು ೫೦೦ ಕೋಟಿ ಹಣ ಮಂಜೂರು ಮಾಡಿಸಿಕೊಂಡು ಬಂದು ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರಚಾರಾಂದೋಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ಹೇಳಿದರು.
ತುಮಕೂರು ಗ್ರಾಮಾಂತರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದಿಂದ ಹಮ್ಮಿಕೊಂಡಿದ್ದ ಪ್ರಚಾರಾಂದೋಲನ ಕಾರ್ಯಕ್ರಮವನ್ನು ಬೆಳಗುಂಬ ಗ್ರಾಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕ ಗೌರಿಶಂಕರ್ ತಮ್ಮ ಕ್ಷೇತ್ರವನ್ನು ಮಾದರಿ ಮಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಗೌರಿಶಂಕರ್ ಈಗಾಗಲೇ ತಮ್ಮ ಉತ್ತಮ ಕಾರ್ಯಗಳ ಮೂಲಕ ಜನ ಮೆಚ್ಚದ ನಾಯಕರೆನಿಸಿಕೊಂಡಿದ್ದಾರೆ. ಅಪ್ಪ ಚೆನ್ನಿಗಪ್ಪರ ಹಾದಿಯಲ್ಲೇ ಸಾಗುತ್ತಿರುವ ಅವರು ಮತ್ತೊಬ್ಬ ಚೆನ್ನಿಗಪ್ಪ ಆಗಲಿದ್ದಾರೆ. ಬಡವರು, ರೈತರ ಸೇವೆ ಮಾಡುತ್ತಿರುವ ಇಂಥ ಶಾಸಕರನ್ನು ಪಡೆಯಲು ಗ್ರಾಮಾಂತರ ಕ್ಷೇತ್ರದ ಜನ ಪುಣ್ಯ ಮಾಡಿದ್ದಾರೆ ಎಂದರು.
ಕೊರೊನಾ ಬಂದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಇಡೀ ದೇಶವೇ ಲಾಕ್‌ಡೌನ್ ಆದ ಸಮಯದಲ್ಲಿ ಶಾಸಕ ಗೌರಿಶಂಕರ್ ಕ್ಷೇತ್ರದ ಪ್ರತಿ ಮನೆಗೆ ಧವಸ ಧಾನ್ಯ ನೀಡಿದ್ದಾರೆ. ಜತೆಗೆ ರೈತರು ಬೆಳೆದ ತರಕಾರಿ ಖರೀದಿಸಿ ಜನರಿಗೆ ನೀಡಿದ್ದಾರೆ. ಹಬ್ಬ ಹರಿದಿನಗಳಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮ, ಬಾಗಿನ, ಸೀರೆ ನೀಡಿದ್ದಾರೆ. ಇಂಥ ಪುಣ್ಯದ ಕೆಲಸ ಮಾಡುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯ ಎಂದರು.
ಗ್ರಾಮಾಂತರದ ಪ್ರತಿ ಗ್ರಾಮಗಳಿಗೂ ಮೂಲಭೂತ ಸೌಲಭ್ಯ ಕಲ್ಪಿಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸಿರುವುದು, ರೈತರ ಸಮಸ್ಯೆಗೆ ಸ್ಪಂದಿಸುವುದು, ಉತ್ತಮ ರಸ್ತೆ ನಿರ್ಮಾಣ, ಶಾಲೆಗಳ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಸಹಾಯ ಹೀಗೆ ಹತ್ತಾರು ಜನಪರ ಕಾರ್ಯ ಮಾಡುತ್ತಿದ್ದಾರೆ. ಈ ಕಾರ್ಯವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರಚಾರಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಎಸ್. ವೆಂಕಟೇಶ್ ಮಾತನಾಡಿ, ಶಾಸಕ ಗೌರಿಶಂಕರ್ ಗ್ರಾಮಾಂತರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಇವುಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಗ್ರಾಮಾಂತರ ಕ್ಷೇತ್ರದ ಗ್ರಾಮ ಪಂಚಾಯ್ತಿಗಳು, ಹೋಬಳಿ ಮಟ್ಟದಲ್ಲಿ ಪ್ರಚಾರಾಂದೋಲನ ನಡೆಸಲಾಗುತ್ತಿದೆ. ಒಂದು ವಾರ ಕಾಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಗೌರಿಶಂಕರ್ ಅವರು ಸರ್ಕಾರದ ಯೋಜನೆಗಳಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಸಾಕಷ್ಟು ಕಾರ್ಯ ಮಾಡಿದ್ದಾರೆ. ಬಡವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ರೈತರಿಗೆ ನೆರವಾಗಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕುಂಬಣ್ಣ, ಮಂಜುನಾಥ್, ರಾಮಕೃಷ್ಣಪ್ಪ, ಬಸವರಾಜು, ಮಂಜು, ಪುಷ್ಪಲತಾ, ರಾಜು, ಸತೀಶ್, ಮುನಿಯಪ್ಪ, ವೆಂಕಟೇಶ್, ಗೌಸ್, ಚನ್ನಪ್ಪ, ಶಿವಕುಮಾರ್, ಮಧು, ದರ್ಶನ್ ಮತ್ತಿತರರು ಭಾಗವಹಿಸಿದ್ದರು.
ಬೆಳಗುಂಬ ಗ್ರಾಮದಿಂದ ಆರಂಭವಾದ ಪ್ರಚಾರಾಂದೋಲ ಹೆಬ್ಬೂರು, ಕಣಕುಪ್ಪೆ, ನಿಡುವಳಲು, ಸಿರಿವರದಲ್ಲಿ ನಡೆಯಿತು.