ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ನೀಡಿದ ಜಗಳೂರು ತಹಶೀಲ್ದಾರ್

ಜಗಳೂರು.ಜ.೨೨: ಸ್ವಾತಂತ್ರ್ಯ ಬಂದು 75 ವರ್ಷಗಳೇ ತುಂಬಿದ್ದರೂ ಇದುವರೆಗೂ ಆ ಗ್ರಾಮಕ್ಕೆ ಸರಕಾರಿ ಸಾರಿಗೆಯಾಗಲಿ, ಖಾಸಗಿ ಸಾರಿಗೆ ವ್ಯವಸ್ಥೆಯಿಲ್ಲದ ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯವನ್ನು  ತಾಲೂಕು ಆಡಳಿತ ಹಮ್ಮಿಕೊಂಡಿದ್ದು ಬಹುತೇಕ ಸಮಸ್ಯೆಗಳಿಗೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಸ್ಥಳದಲ್ಲೇ ಪರಿಹಾರ ನೀಡಿದರು.ಕಂದಾಯ ಇಲಾಖೆ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುಸ್ಟೂರು ಗ್ರಾಪಂ ವ್ಯಾಪ್ತಿಗೆ ಒಳಪಡುವ ಮೂಡಲ ಮಾಚಿಕೆರೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಈ ಗ್ರಾಮದ ಜನರ ಬಹು ವರ್ಷಗಳ ಬೇಡಿಕೆಯಾದ ಸಾರಿಗೆ ಸಂಪರ್ಕವನ್ನು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಮತ್ತು ಜಿಪಂ ಸಿಇಒ ಡಾ.ಎ.ಚನ್ನಪ್ಪ ಮನಗಂಡಿದ್ದು ಶೀಘ್ರೇವೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಈ ಗ್ರಾಮದಲ್ಲಿ ಅನೇಕ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುತ್ತೇವೆ. ಇಡೀ ಆಡಳಿತ ವ್ಯವಸ್ಥೆ ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆ ಆಲಿಸುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ರಸ್ತೆಯ ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರ ಸ್ಥಳಾಂತರ, ಶಾಲಾಕಾಂಪೌಂಡ್ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ವೃದ್ಧಾಪ್ಯ ವೇತನಕ್ಕೆ ಅನೇಕ ಅರ್ಜಿಗಳು ಬಂದಿದ್ದು ಆದಷ್ಟು ಬೇಗ ಬಗೆಹರಿಸಲಾಗುವುದು. ವ್ಯಾಜ್ಯ ಮುಕ್ತ ಗ್ರಾಮ ಮಾಡುವುದು ನಮ್ಮ ಉದ್ದೇಶವಾಗಿದೆ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಅರ್ಜಿಗಳನ್ನು ಸಲ್ಲಿಸಿದರೆ ಶೀಘ್ರವೇ ಬಗೆಹರಿಸುತ್ತೇವೆ ಎಂದರು.ಜಗಳೂರು ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಉದ್ಘಾಟಿಸಿದರು.ಬಿಇಓ ಉಮಾದೇವಿ, ಅಂಗನವಾಡಿ ಕೇಂದ್ರ ಶೀಘ್ರವೇ ಶಾಲಾ ಅಂಗಳಕ್ಕೆ ಸ್ಥಳಾಂತರಿಸಲು ಆದೇಶ ನೀಡಿದ್ದೇನೆ. ಅಂಗನವಾಡಿ ಕೇಂದ್ರ ನಿರ್ಮಾಣವಾಗುವವರೆಗೂ ಸರಕಾರಿ ಶಾಲಾ ಆವರಣದಲ್ಲೇ ಮಕ್ಕಳು ಕಲಿಯಲು ಕೊಠಡಿ ಬಿಟ್ಟುಕೊಡಲು ಸೂಚನೆ ನೀಡಲಾಗಿದೆ ಎಂದರು.ಟಿಎಚ್‍ಒ ನಾಗರಾಜ್, ಕೋವಿಡ್ ಲಸಿಕಾಕರಣ ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಿ, ಮಕ್ಕಳಿಗೆ, ಗರ್ಭಿಣಿಯರಿಗೆ ವಿವಿಧ ಯೋಜನೆಗಳು ಇದ್ದು ಪ್ರತಿ ವಾರ ಹಿಂದುಳಿದ ಗ್ರಾಮವಾದ ಮೂಡಲ ಮಾಚಿಕೆಗೆರೆ ವೈದ್ಯರ ತಂಡ ಕಳುಹಿಸಿ ಕ್ಯಾಂಪ್ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗವುದು ಎಂದರು.ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಗ್ರಾಮೀಣ ಕುಡಿಯುವ ನೀರು ಯೋಜನೆ ಎಂಜಿನಿಯರ್ ಸಾದೀಕ್ ಉಲ್ಲಾ ಖಾನ್, ನರೇಗಾ ಎಡಿ ವಾಸುದೇವ, ಪಿಡಬ್ಯೂಡಿ ಎಇಇ ಯು. ರುದ್ರಪ್ಪ, ಸಿಡಿಪಿಓ ಬೀರೇಂದ್ರಕುಮಾರ್, ರೇಷ್ಮೆ ಇಲಾಖೆ ಅಧಿಕಾರಿ ಬಾಲಸುಬ್ರಹ್ಮಣ್ಯ ಜೋಯಿಸಾ, ಪಶು ಇಲಾಖೆ ಅಧಿಕಾರಿ ಮಹಾದೇವಪ್ಪ ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.