ಗ್ರಾಮಸ್ಥರ ಬೇಡಿಕೆ ಈಡೇರಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕಾರ: ರಾಂಪುರೆ

ಬೀದರ್: ಜ.11:ಬೀದರ್‍ನಿಂದ ಬರೀ 2 ಕಿ.ಮೀ ದೂರದಲ್ಲಿರುವ ತಾಲೂಕಿನ ಹಮಿಲಾಪುರ ಗ್ರಾಮದಲ್ಲಿ 235 ಜನ ವಾಸಿಸುತ್ತಿದ್ದು, ಇಲ್ಲಿಯ ದಲ್ಲಾಳಿಗಳು ಸಾರ್ವಜನಿಕ ಆಸ್ತಿಯನ್ನು ಕಬಳಿಸಿ ಇಲ್ಲಿಯ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿರುವುದು ಖಂಡನಾರ್ಹ. ಕೂಡಲೇ ನಮ್ಮ ಮೇಲಾಗುತ್ತಿರುವ ಅನ್ಯಾಯ ಸರಿಪಡಿಸದೇ ಇದ್ದಲ್ಲಿ ಬರುವ ಲೋಕಸಭೆ ಚುನಾವಣೆ ಬಹಿಸ್ಕರಿಸುವುದಾಗಿ ಹಮಿಲಾಪುರ ಬುದ್ದ ಯುವಕ ಸಂಘದ ಅಧ್ಯಕ್ಷ ಮಹೇಶ ರಾಂಪುರೆ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಏಪ್ರಿಲ 26 2023ರಂದು ಚುನಾವಣೆ ನೀತಿ ಸಂಹಿತೆ ಇದ್ದಾಗಲೇ ಗಾದಗಿ ಗ್ರಾಮ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದ್ವಜ ಕಟ್ಟೆ ತೆರವುಗೊಳಿಸಿ ಬಾಬಾ ಸಾಹೇಬ್‍ರಿಗೆ ಅವಮಾನ ಮಾಡಿದ್ದಾರೆ. ಈ ವಿಚಾರವಾಗಿ ಬೀದರ್ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ, ಜಿ.ಪಂ ಸಿ.ಇ.ಒ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಏನು ಪ್ರಯೋಜನ ಆಗಲಿಲ್ಲ. ಸಂವಿಧಾನ ಬರೆದು ದೇಶದ ಪ್ರಜಾಪ್ರಭುತ್ವ ಬಲಪಡಿಸಿದ ಡಾ.ಅಂಬೇಡ್ಕರ್ ಅವರನ್ನೇ ಅವಮಾನಿಸಿದಾಗ ಬಾಬಾ ಸಾಹೇಬರ ಹೆಸರಲ್ಲಿ ಸರ್ಕಾರ ನಡೆಸುವ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ದಿವ್ಯ ಮೌನ ವಹಿಸಿರುವುದು ಗಮನಿಸಿದರೆ ನಮ್ಮ ಗ್ರಾಮವನ್ನು ಭೂಮಾಫಿಯಾಗಳ ಕೈವಶ ಮಾಡಿ ನಮ್ಮನ್ನು ಬೀದಿಗೆ ತಳ್ಳುವ ಪಿತುರಿ ನಡೆಸಿದ್ದಾರೆ. ಹೀಗೆ ಅನ್ಯಾಯ ಮಾಡುವ ಬದಲು ಒಮ್ಮೇಲೆ ವಿಷ ಕೊಟ್ಟು ನಮ್ಮನ್ನೆಲ್ಲ ಕೊಂದು ಬಿಡಿ ಇಡೀ ನಿಮ್ಮದೇ ರಾಜ ನಡೆಯುತ್ತದೆ ಎಂದು ಜಿಲ್ಲಾಡಳಿತದ ವಿರೂದ್ಧ ಹರಿಹಾಯ್ದರು.
ಹಮಿಲಾಪುರ ಗ್ರಾಮದಲ್ಲಿ ಈಗ ಬರೀ 15 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 2 ಲಿಂಗಾಯತರು, 2 ಬಡಿಗತನ ಮಾಡುವವರು ಸೇರಿದಂತೆ ಬರೀ 75 ಮನೆಗಳು ಮಾತ್ರ ಉಳಿದುಕೊಂಡಿವೆ. ಈ ಎಲ್ಲ ಮನೆಗಳನ್ನು ಎಬ್ಬಿಸಲೆಂದೆ ದಲಿತ ಸಂಘಟನೆ ಹೆಸರು ಹೇಳಿಕೊಂಡು ರಾಜಕುಮಾರ ಮೂಲಭಾರತಿ ಎಂಬಂಥವರು ದಲ್ಲಾಳಿತನ ಶುರು ಮಾಡಿ ಅಲ್ಪಸಮಖ್ಯಾತರಿಗೆ ಅದರಲ್ಲೂ ಕ್ರೈಸ್ತ ಹಾಗೂ ಮುಸಲ್ಮಾನ ಬಾಂಧವರಿಗೆ ನಮ್ಮ ವಿರೂದ್ಧ ಎತ್ತಿ ಕಟ್ಟುವ ಕೆಲಸಕ್ಕೆ ಕೈ ಹಾಕಿರುವರು. ಇದಕ್ಕೆ ಸ್ಥಳಿಯ ಪೋಲಿಸರ ಕುಮ್ಮಕ್ಕು ಸಹ ಇದೆ ಎಂಬುದಾಗಿ ಮಹೇಶ ಗಂಭೀರ ಆರೋಪ ಮಾಡಿದರು.
ನಮ್ಮ ಗ್ರಾಮದವರೆ ಆದ ಶೋಭಾ ಗಂಡ ಮನೋಹರ ಎನ್ನುವವರು ಸಾರ್ವಜನಿಕ ಜಮಿನು ಸುಮಾರು 10 ಎಕರೆದಷ್ಟು ತಮ್ಮ ವಶ ಮಾಡಿಕೊಂಡಿರುವರು. ನಿಜವಾಗಿ ಇದು ನಿಜಾಮ ಕಾಲದಲ್ಲಿ ಕಡು ಬಡವರಿಗಾಗಿ ಇನಾಮ ಜಮಿನು ಎಂದು ನೀಡಲಾಗಿತ್ತು. ಅದು ಮಾರಲು ಬರುವುದಿಲ್ಲ. ಆದರೆ ಇವರು ನಕಲಿ ದಾಖಲಿ ಸೃಷ್ಟಿಸಿ ತಮ್ಮ ಹೆಸರಿಗೆ ಬರೆದುಕೊಳ್ಳುತ್ತಾರೆ. ಅದನ್ನು ನಗರದ ಅನೇಕ ದಲ್ಲಾಳಿಗರಿಗೆ ಬಿಕರಿ ಮಾಡಿರುತ್ತಾರೆ. ಹೀಗೆ ಗ್ರಾಮದ ಸಾರ್ವಜನಿಕ ಆಸ್ತಿ ಕಬಳಿಸಿ ಗ್ರಾಮಸ್ತರನ್ನು ಬೀದಿಗೆ ತಳ್ಳುವ ಇಂಥ ದುರುಳರ ವಿರೂದ್ಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಟಧಿಕಾರಿಗಳು ಕೂಡಲೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಅವರ ವಿರೂದ್ಧ ಕಾನೂನು ಕ್ರಮ ಜರುಗಿಸಿ ಗ್ರಾಮಸ್ಥರನ್ನು ಸುರಕ್ಷಿತಗೊಳಿಸಬೇಕೆಂದು ಮಹೇಶ ಅವರು ಮನವಿ ಮಾಡಿದರು.
ನಮ್ಮ ಗ್ರಾಮದಲ್ಲಿ ನಮ್ಮವರಿಗಾಗಿ ಸ್ಮಶಾನ ಭೂಮಿ ಸಹ ಇರಲಿಲ್ಲ. ನಾನು ಸ್ವತಃ ಪ್ರಯತ್ನ ಪಟ್ಟು ಗ್ರಾಮದ ಎಲ್ಲ ಜನರಿಗಾಗಿ ರುದ್ರಭೂಮಿ ಮಂಜುರಿ ಮಾಡಿರುತ್ತೇನೆ. ನಾನು ಗ್ರಾಮದ ವಿಕಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಾಗ ಕೂಡಲೇ ಅದಕ್ಕೆ ಪ್ರತಿಕ್ರಿಯ ನೀಡಿ ಜಿಲ್ಲಾಡಳಿತಕ್ಕೆ ನಿರ್ದೇಶನ ಸಹ ನೀಡಿರುತ್ತಾರೆ. ಹಾಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೂ ಈ ವಿಚಾರ ತಿಳಿಸಿದಾಗ, ಹಿಂದುಪರ ಸಂಘಟನೆಯ ರುವಾರಿಗಳು ಹಾಗೂ ಬಿಜೆಪಿ ಕಲಬುರಗಿ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಅವರಿಗೆ ನಮ್ಮ ಗ್ರಾಮದ ವಿಚಾರ ಮನವರಿಕೆ ಮಾಡಿದಾಗ ನಮ್ಮ ಪರವಾಗಿ ಧ್ವನಿ ಎತ್ತಿದ್ದಾರೆ. ಡಿಸೆಂಬರ್ 2 2023ರಂದು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಚಿರಂಜೀವ ಅವರು ಜಿಲ್ಲಾಧಿಕಾರಿಗಳಿಗೆ ನಮ್ಮ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಸೂಚಿಸಿರುತ್ತಾರೆ. ರಾಜ್ಯದ ಪಂಚಾಯತ್ ರಾಜ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಕಾರ್ಯದರ್ಶಿ ಭೀಮಾಶಂಕರ ಅವರು ಸಹ ಜಿಲ್ಲಾಡಳಿತ ಹಾಗೂ ಜಿ.ಪಂ ಸಿ.ಇ.ಒ ಅವರಿಗೆ ಪತ್ರ ಸಹ ಬರೆದಿರುತ್ತಾರೆ. ಆದರೆ ದಲಿತರ ಹೆಸರು ಹೇಳಿಕೊಂಡು ಅನೇಕ ದಲಿತಪರ ಸಂಘಟನೆಗಳು ಈ ಕಡೆ ತಿರುಗಿ ಸಹ ನೋಡಲಿಲ್ಲ. ಸಂವಿಧಾನದ ರಕ್ಷಣೆ ಮಾಡುವ ಹೆಸರು ಹೇಳಿಕೊಳ್ಳುತ್ತಿರುವ ಇವರು ಸಂವಿಧಾನ ಶಿಲ್ಪಿಗೆ ಅವಮಾನ ಆದರೂ ಮೌನ ವಹಿಸಿದ್ದಾರೆ ಎಂದು ಕಿಡಿ ಕಾರಿದರು.
ದಲಿತ ಮುಖಂಡರಾದ ಪ್ರಭಾಕರ ಭೋಸ್ಲೆ, ಕಿಶೋರ ರಾಂಪುರೆ, ವಿಶಾಲ ಹೊನ್ನಾ, ಲಕ್ಷ್ಮಣ ಕಾಂಬಳೆ, ಘಾಳೆಮ್ಮ ರಾಂಪುರೆ, ಈರಮ್ಮ ರಾಂಪುರೆ, ಚಿತ್ರಮ್ಮ ರಾಂಪುರೆ ಸೇರಿದಂತೆ ಅನೇಕರು ಪತ್ರಿಕಾ ಗೋಷ್ಟಿಯಲ್ಲಿದ್ದರು.