ಗ್ರಾಮಸ್ಥರ ಕುಂದುಕೊರತೆ ಆಲಿಸಿದ ಸಿದ್ಧರಾಮಯ್ಯ

ಕುಳಗೇರಿ ಕ್ರಾಸ್,ಮೇ30: ಸ್ವಕ್ಷೇತ್ರಕ್ಕೆ ಆಗಮಿಸಿದ ಮಾಜಿ ಮುಖ್ಮಮಂತ್ರಿ ಸಿದ್ಧರಾಮಯ್ಯ ಖಾನಾಪೂರ ಎಸ್‍ಕೆ ಗ್ರಾಮ ಸೇರಿದಂತೆ ಹಲವು ಗ್ರಾಮಸ್ಥರ ಕುಂದು ಕೊರತೆಗಳನ್ನಾಲಿಸಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ಇಂದು ಗ್ರಾಮಸ್ಥರ ಜೊತೆಗೂಡಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಖಾನಾಪೂರ ಎಸ್‍ಕೆ ಗ್ರಾಮದ ಗ್ರಾಪಂ ಸದಸ್ಯ ಶೇಖಪ್ಪ ಪವಾಡಿನಾಯ್ಕರ್ ಮನವಿ ಪತ್ರ ಸಲ್ಲಿಸುವ ಮೂಲಕ ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ವಿವರಿಸಿದರು.
ಮನವಿಗೆ ಸ್ಪಂದಿಸಿದ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯಾಧಿಕಾರಿ ಡಾ.ವೈ ಜೆ ಮನಿಯಾರ ಅವರನ್ನ ಕರೆದು ಸಮಸ್ಯೆಗಳ ಕುರಿತು ವಿಚಾರಿಸಿದರು. ಸುಮಾರು ಏಳೆಂಟು ವರ್ಷಗಳಿಂದ ಆರೋಗ್ಯ ಕೇಂದ್ರದಲ್ಲಿ ಎಂ.ಬಿ.ಬಿ.ಎಸ್ ವೈದ್ಯರಿಲ್ಲ ಎಂಬ ಸುದ್ದಿ ತಿಳಿದ ಶಾಸಕರು ಗರಂ ಆದರು ನಂತರ ಮಾಹಿತಿ ಕಲೆಹಾಕಿದರು. ಕಾಯಂ ಎಂ.ಬಿ.ಬಿ.ಎಸ್ ವೈದ್ಯರನ್ನ ನೇಮಕ ಮಾಡಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಕೊಟ್ಟು, ಸದ್ಯದಲ್ಲೇ ಆರೋಗ್ಯ ಕೇಂದ್ರವನ್ನ ಮೇಲ್ದರ್ಜೆಗೇರಿಸಿ ಮೊದಲು ಗ್ರಾಮೀಣ ಜನರ ಆರೋಗ್ಯ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನ ಬಗೆ ಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಗ್ರಾಮದ ಎಪಿಎಂಸಿ ಆವರಣದಲ್ಲಿ ವಾಸವಾಗಿರುವ 80ಕ್ಕೂ ಹೆಚ್ಚು ಸುಡುಗಾಡ ಸಿದ್ದರ ಕುಟುಂಬದವರು ಶಾಸಕರೆದುರು ತಮ್ಮ ಅಳಲು ತೋಡಿಕೊಂರು. ಲಾಕ್‍ಡೌನ್ ನಿಂದಾಗಿಗಿ ನಾವು ಯಾವ ಗ್ರಾಮದಲ್ಲಿ ಹೋಗುವಂತಿಲ್ಲ ಕಾರಣ ನಮಗೆ ತಮ್ಮ ಸಹಾಯ ಸಹಕಾರ ಅವಶ್ಯವಾಗಿದೆ ಎಂದು ಮನವಿ ಮಾಡಿದರು. ಮನವಿಯನ್ನು ಆಲಿಸಿದ ಶಾಸಕ ಸಿದ್ದರಾಮಯ್ಯ ಅಲೆಮಾರಿ ಜನಾಂಗಕ್ಕೂ ಭರವಸೆ ನೀಡಿದರು.
ಮುಖಂಡರಾದ ಸಣ್ಣಬೀರಪ್ಪ ಪೂಜಾರ, ನಾಗಪ್ಪ ಅಡಪಟ್ಟಿ, ಹನಮಂತ ಯಕ್ಕಪ್ಪನವರ, ಗ್ರಾಪಂ ಅಧ್ಯಕ್ಷ ಬಸು ಕಟ್ಟಿಕಾರ, ಸದಸ್ಯರಾದ ಶೇಖಪ್ಪ ಪವಾಡಿನಾಯ್ಕರ್, ಲಕ್ಷಂಣ್ಣ ದಾದನಟ್ಟಿ, ವೆಂಕಣ್ಣ ಹೊರಕೇರಿ, ಹನಮಂತ ನರಗುಂದ, ಮಾರುತಿ ತಳವಾರ, ಬೀರಪ್ಪ ಪೆಂಟಿ, ಶಿವಾನಂದ ಚೋಳನ್ನವರ, ರಾಮನಗೌಡ ದ್ಯಾವನಗೌಡ್ರ, ಯಮನಪ್ಪ ಪೂಜಾರ, ಶ್ರೀಕಾಂತ ಪೂಜಾರ, ಅಡಿವೆಪ್ಪ ಹಿರಗನ್ನವರ, ಬಸಪ್ಪ ಪೂಜಾರ, ಕರಿಗೌಡ ಮುಷ್ಟಿಗೇರಿ, ಹನಮಂತ ಹುಳ್ಳಿ, ಪುಂಡಲಿಕ ಪಾಟೀಲ್ ಸೇರಿದಂತೆ ಅಧಿಕಾರಿಗಳು ಗ್ರಾಮಸ್ಥರು ಇದ್ದರು