ಗ್ರಾಮಸ್ಥರಿಗೆ ವರದಾನವಾದ ಗೊಗ್ಗವ್ವೆ ಕೆರೆ

ಔರಾದ್:ಮಾ.23: ಕಳೆದ ವರ್ಷ ಲಾಕ್‍ಡೌನ್ ಅವಧಿಯಲ್ಲಿ ನಿರ್ಮಿಸಲಾದ ಗೊಗ್ಗವ್ವೆ ಕೆರೆ ಈಗ ಧುಪತಮಹಾಗಾಂವ್ ಗ್ರಾಮಸ್ಥರಿಗೆ ವರದಾನವಾಗಿದೆ.

ಸುಮಾರು ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಈ ಕೆರೆ ಬೇಸಿಗೆಯಲ್ಲೂ ನೀರು ತುಂಬಿದ್ದು ಗ್ರಾಮಸ್ಥರ ದಶಕದ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಅಂದಿನ ಜಿಲ್ಲಾ ಪಂಚಾಯಿತಿ ಸಿಇಒ ಜ್ಞಾನೇಂದ್ರಕುಮಾರ ಗಂಗ್ವಾರ್ ಅವರ ಮುತುವರ್ಜಿ ಹಾಗೂ ಗ್ರಾಮಸ್ಥರ ಸಹಕಾರದಿಂದ ನಿರ್ಮಾಣಗೊಂಡ ಕೆರೆ ಬಹು ಉಪಯೋಗಿಯಾಗಿ ಪರಿಣಮಿಸಿದೆ.

‘ಈ ಕೆರೆ ನಿರ್ಮಾಣದಿಂದ ಊರಿನಲ್ಲಿ ಅಂತರ್ಜಲ ಹೆಚ್ಚಾಗಿದೆ. ಹಳೆ ತೆರೆದ ಬಾವಿ, ಕೊಳವೆ ಬಾವಿಗಳಲ್ಲೂ ನೀರು ಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಸರ್ಕಾರದ ಬಗ್ಗೆ ಗೌರವ ಹೆಚ್ಚಿದೆ’ ಎಂದು ಪಿಡಿಒ ಶಿವಾನಂದ ಔರಾದೆ ತಿಳಿಸಿದ್ದಾರೆ.

’12ನೇ ಶತಮಾನದ ಶರಣರಲ್ಲಿ ಒಬ್ಬರಾದ ಗೊಗ್ಗವ್ವೆ ಧುಪತಮಹಾಗಾಂವ್ ಗ್ರಾಮದಲ್ಲಿ ಧೂಪದ ಕಾಯಕ ಮಾಡುತ್ತಿದ್ದರು.ಇವರ ಹೆಸರಿನಲ್ಲಿ ಕೆರೆ ಇದೆ. ನಮ್ಮ ಊರು ಕೂಡ ಇವರ ಹೆಸರಿನಲ್ಲಿ’ ಇದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನೆಹರು ಬಿರಾದಾರ ತಿಳಿಸುತ್ತಾರೆ.
‘ಕೆರೆ ಸುತ್ತ ಇನ್ನು ಒಂದು ಎಕರೆ ಜಾಗ ಇದೆ. ಉದ್ಯಾನ ಮಾಡಿ ಊರಿನ ಸೌಂದರ್ಯ ಹೆಚ್ಚಿಸುವುದರ ಜತೆಗೆ ಇದೊಂದು ಐತಿಹಾಸಿಕ ತಾಣವಾಗಿ ನಿರ್ಮಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರವೂ ಇದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಮಾಹಿತಿ ನೀಡುತ್ತಾರೆ.

‘ಗೊಗ್ಗವ್ವೆ ಕೆರೆಯಿಂದಾಗಿ ನಮ್ಮ ಪಂಚಾಯಿತಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಜತೆ ಸಂವಾದ ನಡೆಸುತ್ತಿರುವುದು ಇಡೀ ಜಿಲ್ಲೆಗೆ ಹಮ್ಮೆಯ ವಿಷಯ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜೊನ್ನೆಕೇರಿ ಹರ್ಷ ವ್ಯಕ್ತಪಡಿಸಿದ್ದಾರೆ.