ಗ್ರಾಮಸ್ಥರಿಂದ ಆಮರಣ ಉಪವಾಸ

ಲಕ್ಷ್ಮೇಶ್ವರ,ಜೂ23: ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಗಳ ಹಣ ದುರ್ಬಳಕೆ, ಜಾಬ್ ಕಾರ್ಡ್, ಕೆಲಸಗಾರರ ಲೆಕ್ಕಪರಿಶೋಧನೆ, ಕಾಮಗಾರಿಗಳ ಪರಿಶೋಧನೆ ಹಾಗೂ ಬಡವರಿಗೆ ವಿತರಿಸಬೇಕಾಗಿದ್ದ ನಿವೇಶನಗಳನ್ನು ಬೇನಾಮಿ ಹೆಸರಿನಲ್ಲಿ ಹಣ ಪಡೆದು ವಿತರಿಸಿದ ಬಗ್ಗೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ಮೀನಾಮೇಷ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ನಾಲ್ವರು ಗ್ರಾಮಸ್ಥರು ತಾಲೂಕ ಪಂಚಾಯಿತಿ ಆವರಣದಲ್ಲಿ ಆಮರಣ ಉಪವಾಸವನ್ನು ಬುಧವಾರದಿಂದ ಆರಂಭಿಸಿದ್ದಾರೆ.
ಜಿಲ್ಲೆಯ ಎಲ್ಲ ಅಧಿಕಾರಿಗಳಿಗೂ ಬರೆದಿರುವ ಮನವಿ ಪತ್ರದಲ್ಲಿ 2021ರಲ್ಲಿ ಬದುವು ನಿರ್ಮಾಣ ಕಾರ್ಯದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಣವನ್ನು ಲಪಟಾಯಿಸಲಾಗಿದೆ. ಅದೇ ರೀತಿ ಕೆರೆ ಹೂಳೆತ್ತುವ ಲ್ಲಿ ಅವ್ಯವಹಾರವಾಗಿದೆ ಈ ಎಲ್ಲಾ ದೂರುಗಳನ್ನು ಆಧರಿಸಿ ಜಿಲ್ಲಾ ಪಂಚಾಯಿತಿಗೆ ತಕರಾರು ನೀಡಿದಾಗ, ಜಿಲ್ಲಾ ಪಂಚಾಯತಿ ಓಂಬಡಸಮನ್ ಕಳಿಸಿ ನೈಜ ವರದಿಯನ್ನು ಸಲ್ಲಿಸುವಂತೆ ತಿಳಿಸಿದರು. ಆದರೆ ಕಳೆದ ಆರು ತಿಂಗಳಿನಿಂದಲೂ ವರದಿಯನ್ನು ರಾಜಕೀಯ ಪ್ರಭಾವದಿಂದ ಮುಚ್ಚಿ ಹಾಕಲಾಗಿದೆ.
ಸಾಕಷ್ಟು ಅವ್ಯವಹಾರಗಳಾಗಿದ್ದು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಕುರಿತು ಸಂತೋಷ ಮಾದನಹಳ್ಳಿ, ಪ್ರಶಾಂತ ಬಡೆಪ್ಪನವರ, ರಮೇಶ ಹುಲುಗೂರ, ಅಮಾತೆಪ್ಪ ಹರವಿ ಅವರು ಹೇಳಿಕೆಯನ್ನು ನೀಡಿ ಸಮಗ್ರ ತನಿಖೆಯಾಗುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಪ್ರತಿಕ್ರಿಯಿಸಿ ಒಂದು ತಿಂಗಳು ಕಾಲಾವಕಾಶ ನೀಡಿದ್ದಾರೆ ಕೂಲಂಕಶ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಟಿ. ಅಮ್ಮನವರ ಪ್ರತಿಕ್ರಿಯೆ ನೀಡಿ ಸಾಧ್ಯವಾದ ದಾಖಲೆಗಳನ್ನು ನೀಡಲಾಗಿದೆ ಮಾಹಿತಿ ಹಕ್ಕಿನಡಿ ನೀಡಿರುವ ಮಾಹಿತಿಯನ್ನು ದಾಖಲೆ ಪಡೆಯುವಂತೆ ಸೂಚಿಸಲಾಗಿದೆ ಎಂದರು.