ಗ್ರಾಮಲೆಕ್ಕಾಧಿಕಾರಿಗಳ ಕಾರ್ಯ ಶ್ಲಾಘನೀಯ:ಡಿಸಿ.ಅನಿರುದ್ಧ್ ಶ್ರವಣ್


ಸಂಜೆವಾಣಿ ವಾರ್ತೆ
ಹೊಸಪೇಟೆ ಜು28:ಪ್ರವಾಹ ಪರಿಸ್ಥಿತಿ ಸಮಯದಲ್ಲಿ ಜನಸಾಮಾನ್ಯರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಗ್ರಾಮಲೆಕ್ಕಾಧಿಕಾರಿಗಳು ನಿರ್ವಹಿಸಿದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.
ವಿಜಯನಗರ ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಕಂದಾಯ ದಿನಾಚರಣೆ ನಿಮಿತ್ತ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಂದಾಯ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರವಾಹ ಪರಿಸ್ಥಿತಿ ತಲೆದೂರಿ 22 ಗ್ರಾಮಗಳು ಪ್ರವಾಹ ಪರಿಸ್ಥಿತಿಗೆ ಸಿಲುಕಿದ ಸಂದರ್ಭದಲ್ಲಿಯೂ ಮುಖ್ಯಮಂತ್ರಿಗಳಿಗೆ ನಮ್ಮ ಜಿಲ್ಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸುತ್ತೇವೆ ಎಂದು ಹೇಳಿದ್ದೇವೆ. ಗ್ರಾಮಲೆಕ್ಕಾಧಿಕಾರಿಗಳು ಇನ್ನೂ ಹೆಚ್ಚೆಚ್ಚು ಕೆಲಸಗಳನ್ನು ಮಾಡಬೇಕು ಎಂದು ಅವರಿಗೆ ಕಿವಿಮಾತು ಹೇಳಿದರು.
ಮೂಲ ಸೌಕರ್ಯಗಳನ್ನು ನೀಡುವ ಮೂಲಕ ಉತ್ತಮ ಕಾರ್ಯಸಾಧನೆ ನೆರವು ನೀಡುವುದಾಗಿ ತಿಳಿಸಿದ ಅವರು ತಂತ್ರಜ್ಞಾನ ಮತ್ತು ಮೊಬೈಲ್ ಕೆಲಸ ಮಾಡಲು ಮತ್ತಷ್ಟು ಸುಲಭವಾಗಿಸಿದ್ದು, ಗ್ರಾಮಲೆಕ್ಕಾಧಿಕಾರಿಗಳು  ಇನ್ನೂ ಉತ್ತಮ ರೀತಿಯಲ್ಲಿ ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
ವಿಜಯನಗರ ಜಿಲ್ಲೆಯಾದ ನಂತರ ಹರಪನಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಗಳ ಹಳೆಯಜೇಷ್ಠತಾ ಪಟ್ಟಿ ಸರಿಯಾಗಿ ಇರದ ಕಾರಣ ಹೊಸಜೇಷ್ಠತಾ ಪಟ್ಟಿ ತಯಾರಿಸುವ ಸವಾಲು ಎದುರಾಗಿತ್ತು; ಎಡಿಸಿ ಎನ್.ಮಹೇಶ್‍ಬಾಬು ಅವರ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಯಾವುದೇ ತೊಂದರೆಯಾಗದೇ ರೀತಿಯಲ್ಲಿ ತಯಾರಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಎನ್.ಮಹೇಶ್‍ಬಾಬು, ಹರಪನಹಳ್ಳಿ ಉಪವಿಭಾಗದ ಉಪ ವಿಭಾಗಾಧಿಕಾರಿ ಪ್ರಕಾಶ ಟಿ.ವಿ, ಹೊಸಪೇಟೆ ವಿಭಾಗದ ಉಪ ವಿಭಾಗಾಧಿಕಾರಿ ಸಿದ್ರಾಮೇಶ್ವರ ಅವರು ಮಾತಾನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕೊಪ್ಪಳದ ಜಿಲ್ಲಾ ತರಬೇತಿ ಸಂಸ್ಥೆಯ ನಿವೃತ್ತ ಉಪ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಎಂಬ ವಿಷಯದ ಕುರಿತು ಹಾಗೂ ಹೊಸಪೇಟೆಯ ನಿವೃತ್ತ ಉಪ ತಹಶೀಲ್ದಾರರಾದ ಹೆಚ್.ಸುಶಿಲೇಂದ್ರ ಅವರು ಕಂದಾಯ ಇಲಾಖೆ ಕಾಯ್ದೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಮಲ್ಲಿಕಾರ್ಜುನಗೌಡ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಕೆ.ಯಂಕಾರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಕಂದಾಯ ಇಲಾಖೆ ಸಿಬ್ಬಂದಿಯ ಮಕ್ಕಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವಿಜಯನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಉತ್ತಮ ಸೇವೆಸಲ್ಲಿಸಿದ ಶಿರಸ್ತೇದಾರರು, ಪ್ರ.ದ.ಸ, ಗ್ರಾಮಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಸಹಾಯಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಹೊಪೇಟೆಯ ತಹಶೀಲ್ದಾರರಾದ ವಿಶ್ವಜೀತ ಮೇಹತಾ, ಹೂವಿನಹಡಗಲಿ ತಾಲೂಕಿನ ತಹಶೀಲ್ದಾರರಾದ ಶರಣಮ್ಮ.ಕೆ, ಹರಪನಹಳ್ಳಿ ತಾಲೂಕಿನ ತಹಶೀಲ್ದಾರ್ ಡಾ.ಶಿವಕುಮಾರ ಬಿರದಾರ, ಹಗರಿಬೊಮ್ಮನಹಳ್ಳಿ ತಾಲೂಕಿನ ತಹಶೀಲ್ದಾರ್ ಕಾರ್ತಿಕ್.ವಿ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಭವನದ ತಹಶೀಲ್ದಾರರಾದ ಗುರುಬಸವರಾಜ.ಕೆ, ಮೇಘ,ಗ್ರಾಮಸಹಾಯಕ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ.ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕುಗಳ ಘಟಕಗಳ ಅಧ್ಯಕ್ಷರು, ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಮತ್ತು ಗ್ರಾಮ ಸಹಾಯಕ ಸಂಘಗಳ ತಾಲೂಕು ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಸದಸ್ಯರು ಇನ್ನಿತರರಿದ್ದರು.