ಗ್ರಾಮಮಟ್ಟದಲ್ಲಿ ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡದಂತೆ ಕ್ರಮಕೈಗೊಳ್ಳಲು ತಹಶೀಲದಾರರಿಗೆ ಕಟ್ಟುನಿಟ್ಟಿನ ಸೂಚನೆ

ವಿಜಯಪುರ, ಜೂ.2-ಗ್ರಾಮೀಣ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅವಶ್ಯಕ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಹಶೀಲದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ .
ಜಿಲ್ಲಾಧಿಕಾರಿಗಳ ಕಾರ್ಯಾಲಯದ ವಿಡಿಯೊ ಕಾನ್ಫರೆನ್ಸ್ ಸಭಾಂಗಣದ ಮೂಲಕ ಇಂದು ವಿಡಿಯೋ ಸಂವಾದ ನಡೆಸಿದ ಅವರು, ಕೋವಿಡ್ 19 ಎರಡನೇ ಅಲೆಯು ಹರಡದಂತೆ ಸರಪಳಿಯನ್ನು ತುಂಡರಿಸಲು ಈಗಾಗಲೇ ಸರ್ಕಾರದಿಂದ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶಿಸಲಾಗಿದೆ.ಇದರ ನಿಯಂತ್ರಣ ಕುರಿತು ಗ್ರಾಮ /ನಗರ ಮಟ್ಟದಲ್ಲಿ ಅಂಗನವಾಡಿ,ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡವು ಗ್ರಾಮದ ಪ್ರತಿಯೊಂದು ಮನೆಮನೆಗೆ ಸಮೀಕ್ಷೆ ಹಮ್ಮಿಕೊಂಡಿದ್ದು, ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಕೋವಿಡ್ -19 ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಅವರ ಗಂಟಲುದ್ರವವನ್ನು ಪ್ರಯೋಗಾಲಯಕ್ಕೆ ತಪಾಸಣೆಗೆ ಕಳುಹಿಸಲಾಗುತ್ತಿದ್ದು, ಕೋವಿಡ್ ಕೇರ್ ಕೇಂದ್ರ/ ಹೋಮ ಐಸೋಲೇಶನಗೆ ಒಳಪಡಿಸಲಾಗುತ್ತಿದೆ.
ಗ್ರಾಮೀಣಪ್ರದೇಶದಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ ತಹಶೀಲದಾರರು, ಉಪವಿಭಾಗಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್, ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆಗಳನ್ನು ಸಹ ನೀಡಿದರು.
ಸರ್ಕಾರದ ಮಾರ್ಗಸೂಚಿಯಲ್ಲಿ ಮದುವೆ ಸಮಾರಂಭಗಳಿಗೆ ಗರಿಷ್ಠ 40 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮಾರ್ಗಸೂಚಿಯ ಪಾಲನೆಯ ಬಗ್ಗೆ ತಹಶೀಲ್ದಾರರು ಮದುವೆ ಸಮಾರಂಭ ಜರುಗುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಸರ್ಕಾರದ ಮಾರ್ಗಸೂಚಿಯ ಉಲ್ಲಂಘನೆ ಪ್ರಕರಣಗಳಲ್ಲಿ ಕೂಡಲೇ ಪೆÇಲೀಸ್ ಠಾಣೆಯಲ್ಲಿ ಎಫ, ಐ, ಆರ್, ದಾಖಲಿಸಬೇಕು ಎಂದು ತಿಳಿಸಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಇರುವ 5 ಗ್ರಾಮಗಳಿಗೆ ತಹಶೀಲದಾರರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್,ಇವರು ಜಂಟಿಯಾಗಿ ಆಯಾ ಗ್ರಾಮಗಳಿಗೆ ಭೇಟಿ,ನೀಡಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲು ಕಾರಣವೇನು ಎಂಬುದರ ಬಗ್ಗೆ ಪತ್ತೆ ಹಚ್ಚುಬೇಕು ಮತ್ತು ಕೋವಿಡ್ 19 ನಿಯಂತ್ರಣ ಕುರಿತು ಅವಶ್ಯಕ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಸಂಬಂಧಿಸಿದ ಉಪವಿಭಾಗಾಧಿಕಾರಿಗಳು, ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ಗ್ರಾಮಗಳಲ್ಲಿ ತಹಶೀಲದಾರರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳುತಾಲೂಕ್ ಪಂಚಾಯಿತಿ, ಇವರು ತೆಗೆದುಕೊಂಡ ಕ್ರಮದ ಬಗ್ಗೆ ಪ್ರತಿದಿನ ಪರಿಶೀಲನೆ ಮಾಡಬೇಕು ಹಾಗೂ ಕೋವಿಡ್ 19 ನಿಯಂತ್ರಣ ಕುರಿತು ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕೆಂದು ತಿಳಿಸಿದರು.
ತಹಶೀಲದಾರರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್, ಇವರು ಜಂಟಿಯಾಗಿ ಅವರ ತಾಲೂಕಿನ ವ್ಯಾಪ್ತಿಯ ಬೇರೆ ಬೇರೆ 10 ಗ್ರಾಮಗಳಿಗೆ ಪ್ರತಿದಿನ ಭೇಟಿ ನೀಡಿ, ಕೋವಿಡ್ 19 ಮುನ್ನೆಚ್ಚರಿಕೆ ಕುರಿತು ಜನರಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಆಯಾ ಗ್ರಾಮಗಳಲ್ಲಿ ಕೋವಿಡ್ 19 ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ್ ಜಿಲ್ಲಾಧಿಕಾರಿ ರಮೇಶ ಕಳಸದ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.