ಗ್ರಾಮದ ಸಮಸ್ಯೆಗಳಿಗೆ ಧ್ವನಿಯಾದ ಡಿಸಿ ರಾಜೇಂದ್ರ

ಬಾಗಲಕೋಟೆ, ಮಾ 22 : ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಶನಿವಾರ ಇಡೀ ದಿನ ವಾಸ್ತವ್ಯ ಮಾಡುವ ಮೂಲಕ ಗ್ರಾಮದ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಧ್ವನಿಯಾದರು.
ತುಳಸಿಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲ ಕಾಲ್ನಡಿಗೆಯಲ್ಲಿ ಗ್ರಾಮದಲ್ಲಿ ಸಂಚರಿಸುತ್ತ ಜನರ ಸಮಸ್ಯೆಗಳನ್ನು ಆಲಿಸಿದರು. ಸಂಚರಿಸುವ ವೇಳೆಯಲ್ಲಿ ಗ್ರಾಮದಲ್ಲಿನ ಕೆರೆಯನ್ನು ವೀಕ್ಷಿಸಿದರು. ಕೆರೆ ತುಂಬಿಸಿದರೆ ಗ್ರಾಮದ ಜನರಿಗೆ ಅನುಕೂಲವಾಗುವದನ್ನು ಅರಿತು ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಕೆರೆಗೆ ನೀರು ಹರಿಸಲು ಕ್ರೀಯಾ ಯೋಜನೆ ತಯಾರಿಸಲು ಸೂಚಿಸಿದರು.
ಗ್ರಾಮದ ನಂ.2 ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮಕ್ಕಳಿಗೆ, ಬಾಣಂತಿಯರಿಗೆ, ಗರ್ಭೀನಿಯರಿಗೆ ವಿತರಿಸುತ್ತಿರುವ ಆಹಾರ ಪದಾರ್ಥಗಳ ಕಡತಗಳನ್ನು ಪರಿಶೀಲಿಸಿದರು. ಅಂಗನವಾಡಿಯ ಶ್ರಾವಣಿ ಮತ್ತು ವರ್ಷಿಣಿ ಎಂಬ ಮಕ್ಕಳ ಹುಟ್ಟಿದ ಹಬ್ಬವನ್ನು ಜಿಲ್ಲಾಧಿಕಾರಿಗಳು ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಅಂಗನವಾಡಿ ಆವರಣದಲ್ಲಿರುವ ಗಿಡಗಳಿಗೆ ಮಕ್ಕಳಿಂದ ನಿರುಣಿಸುವ ಕಾರ್ಯ ಮಾಡಲಾಯಿತು.
ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ವಿತರಣೆ ಬಗ್ಗೆ ಕಡತ ಪರಿಶೀಲನೆ ನಡೆಸಿದರು. ಪ್ರತಿಯೊಂದು ಪಡಿತರ ಕುಟುಂಬದವರ ಕೆವೈಸಿಯನ್ನು ಕಡ್ಡಾಯವಾಗಿ ಮಾಡುವಂತೆ ತಿಳಿಸಿದರು. ವಿತರಣೆಯಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಿದರು. ನಂ.5 ಅಂಗನವಾಡಿ ಕೇಂದ್ರಕ್ಕೆ ತೆರಳುತ್ತಿದ್ದಂತೆ ಮಕ್ಕಳು ವಿವಿಧ ವೇಷಭೂಷಗಳನ್ನು ಹಾಕಿಕೊಂಡು ಬಾಗಿಲಲ್ಲೇ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದರು. ಮಕ್ಕಳ ಹಾಡುಗಳನ್ನು ಸಹ ಆಲಿಸಿದರು.
ಗ್ರಾಮದಲ್ಲಿರುವ ಗರಡಿಮನೆ, ಜಿಮ್ ಕೇಂದ್ರಕ್ಕೆ ಭೇಟಿ ನೀಡಿದರು. ಗ್ರಾಮದ ಸಂಚಾರ ವೇಳೆ ಮಹಿಳೆಯ ಜಿಲ್ಲಾಧಿಕಾರಿಗಳಲ್ಲಿ ತಮಗಾದ ತೊಂದರೆಯ ಅಳಲನ್ನು ತೋಡಿಕೊಂಡರು. ಮದುವೆಯಾಗದೇ ಮನೆಯಲ್ಲಿಯೇ ಮಾನಸಿಕವಾಗಿ ಅಸ್ವಸ್ಥರಾದ ಮಹಿಳೆಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ಬೇಡಿಕೆಯನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕ್ಕಾಗಿ ಸೂಚಿಸಿದರಲ್ಲದೇ ಸಂಬಂಧಪಟ್ಟ ಸೈಕಾಟ್ರಿಸ್ಟ್‍ಕಡೆ ಪರೀಕ್ಷೆ ಮಾಡಿಸಲು ತಿಳಿಸಿದರು.
ನಂತರ ಗ್ರಾಮದ ಖಾದಿ ಕೇಂದ್ರಕ್ಕೆ ಭೇಟಿ ನೀಡಿ ನೂಲುವರು, ನೇಕಾರರು ಮತ್ತು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದರು. ರಾಷ್ಟ್ರಧ್ವಜದ ಬಟ್ಟೆಯನ್ನು ತಯಾರಿಸುವ ನೇಕಾರಿಗೆ ಸರಕಾರದಿಂದ ಸಹಾಯಧನ ದೊರಕಿಸಿಕೊಡಬೇಕು. ಈ ಕೇಂದ್ರದಲ್ಲಿ 100 ಜನ ಮಹಿಳೆಯರು ಕೆಲಸ ಮಾಡುತ್ತಿದ್ದು, ಬೆಳಿಗ್ಗೆಯಿಂದ ಸಂಜೆಯವರೆಗೂ ದುಡಿದರೆ 120 ರೂ.ಗಳ ಕೂಲಿ ಮಾತ್ರ ದೊರೆಯುತ್ತಿರುವದನ್ನು ಕಂಡು ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.
ಗ್ರಾಮದ ಸಂಚಾರ ವೇಳೆಯಲ್ಲಿ ತುಳಸಿಗೇರಿ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿ.ಪಂ ಸದಸ್ಯರಾದ ಹೂವಪ್ಪ ರಾಠೋಡ, ಶೋಬಾ ಬಿರಾದಾರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ಭಂಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಭೂದಾಖಲೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುಳಗುಂದ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರ ಉಪನಿರ್ದೇಶಕ ಎ.ಕೆ.ಬಸಣ್ಣವರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ತಾ.ಪಂ ಇಓ ಎನ್.ವಾಯ್.ಬಸರಿಗಿಡದ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ
ತುಳಸಿಗೇರಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆ ಗ್ರಾಮದ ಮಹಿಳೆಯರು ಆರತಿ ಮಾಡಿ ಸ್ವಾಗತ ಕೋರಿದರು. ನಂತರ ಜಿಲ್ಲಾಧಿಕಾರಿಗಳಿಗೆ ಹಳದಿ ರುಮಾಲು ಸುತ್ತಿ ಎತ್ತಿನ ಬಂಡಿಯಲ್ಲಿ ವಿವಿಧ ಜಾನಪದ ಕಲಾತಂಡ ಹಾಗೂ ಕುಂಬಹೊತ್ತ ಮಹಿಳೆಯರಿಂದ ಮೆರವಣಿಗೆಯ ಮೂಲಕ ಗ್ರಾಮ ಪಂಚಾಯತಿಗೆ ಕರೆತರಲಾಯಿತು. ಪ್ರಾರಂಭದಲ್ಲಿ ಗ್ರಾಮದ ಆರಾದ್ಯದೈವ ಮಾರುತೇಶ್ವರನ ದರ್ಶನ ಪಡೆದರು. ಗ್ರಾಮ ಪಂಚಾಯತಿಯಲ್ಲಿ ಸ್ಥಾಪಿಸಲಾದ ಅಹವಾಲು ಸ್ವೀಕಾರ ಕೌಂಟರ್‍ಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಅಹವಾಲುಗಳನ್ನು ಸ್ವೀಕರಿಸಲಾಯಿತು.