ಗ್ರಾಮದ ಸಮಗ್ರ, ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ – ಪ್ರಸಾದ್

ಕೋಲಾರ,ಜು,೪:ಜಾತಿ ಬೇಧ ಭಾವ ಇಲ್ಲದೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಜಿಲ್ಲಾ ಕೆಎಸ್‌ಆರ್‌ಟಿಸಿ ಜಿಲ್ಲಾ ಬಲಿಜ ನೌಕರರ ಸಂಘದ ಅಧ್ಯಕ್ಷ ಆರ್.ಪ್ರಸಾದ್ ಸಲಹೆ ನೀಡಿದರು.
ತಾಲೂಕಿನ ಬೆಣ್ಣಂಗೂರು ಗ್ರಾಮದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀ ಯೋಗಿನಾರೇಯಣ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಶಿಕ್ಷಣವೇ ಸಮಗ್ರ ಅಭಿವೃದ್ಧಿಗೆ ಮೂಲಮಂತ್ರವಾಗಿದ್ದು, ಬೆಣ್ಣಂಗೂರು ಗ್ರಾಮದ ಒಟ್ಟು ೮೦೦ ಮಂದಿ ಜನಸಂಖ್ಯೆಗೂ ಒಳಿತಾಗುವ ಹಿತಕಾಪಾಡುವ ಕಾರ್ಯಕ್ರಮಗಳನ್ನು ಸೇವಾ ಟ್ರಸ್ಟ್ ಮೂಲಕ ಮಾಡಬೇಕೆಂದು ಹೇಳಿದರು.
ಯಾವ ನಾಡಿನಲ್ಲಿ ಗುರುವಿಗೆ ಗೌರವ ಸಿಗುತ್ತದೋ ಅಂತ ನಾಡು ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆಯೆಂದು ಹೇಳಿದ ಅವರು, ಗುರುಪೂರ್ಣಿಮೆಯ ದಿನದಂದು ಕೈವಾರತಾತನಯವರ ದೇವಾಲಯದಲ್ಲಿ ಆರಂಭವಾಗುತ್ತಿರುವ ಟ್ರಸ್ಟ್‌ಗೆ ಶುಭವಾಗಲಿ ಎಂದು ಹಾರೈಸಿದರು.
ಸೇವಾಟ್ರಸ್ಟ್ ಬೈಲಾ ಉದ್ಘಾಟಿಸಿದ ಕೋಲಾರ ನಗರದ ಬಲಿಜ ಸಂಘದ ಅಧ್ಯಕ್ಷ ರಘು (ಚಿಟ್ಟಿ ) ಮಾತನಾಡಿ, ಯೋಗಿನಾರೇಯಣ ಸೇವಾ ಟ್ರಸ್ಟ್ ಕೇವಲ ಬೆಣ್ಣಂಗೂರು ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸೇವಾ ಕಾರ್ಯಕ್ರಮಗಳನ್ನು ವಿಸ್ತರಿಸಬೇಕು, ಸೇವಾ ಕಾರ್ಯಗಳಿಗೆ ಅಗತ್ಯ ನೆರವು ನೀಡಲಾಗುವುದುಎಂದು ಘೋಷಿಸಿದರು.
ಕೋಲಾರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರತಿ ಗ್ರಾಮವನ್ನು ಸಂಚರಿಸುತ್ತಾ ಸರಳವಾಗಿ ರಚಿಸಿದ ಕನ್ನಡ ಮತ್ತು ತೆಲುಗು ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿಯನ್ನುಂಟು ಮಾಡಿದ ಕೈವಾರ ನಾರೇಯಣ ತಾತನವರ ಹೆಸರಿನ ಟ್ರಸ್ಟ್ ಗುರುಪೂರ್ಣಿಮೆ ದಿನ ಉದ್ಘಾಟನೆಯಾಗುತ್ತಿದ್ದು, ಟ್ರಸ್ಟ್ ಮೂಲಕ ಸೇವಾ ಕಾರ್ಯಗಳನ್ನು ನಡೆಸಿ ಬೆಣ್ಣಂಗೂರು ಗ್ರಾಮವನ್ನು ಮಾದರಿ ಗ್ರಾಮವಾಗಿಸಬೇಕೆಂದು ಸಲಹೆ ನೀಡಿದರು.
ಬೆಣ್ಣಂಗೂರು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್ ಮಾತನಾಡಿ, ಯೋಗಿನಾರೇಯಣ ಸೇವಾ ಟ್ರಸ್ಟ್ ಹಾಗೂ ಗ್ರಾಮ ಪಂಚಾಯ್ತಿ ನೆರವಿನಿಂದ ಗ್ರಾಮದ ಶಾಲೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆಯೆಂದು ವಿವರಿಸಿದರು.
ಶ್ರೀಯೋಗಿನಾರೇಯಣ ಸೇವಾ ಟ್ರಸ್ಟ್ ಅಧ್ಯಕ್ಷ ರವಿಯಣ್ಣ ಕಾರ್ಯದರ್ಶಿ ದೇವರಾಜ್ ಮಾತನಾಡಿ, ೨೦೧೬ ರಿಂದಲೂ ಟ್ರಸ್ಟ್ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ೨೦೨೩ ರಲ್ಲಿ ಟ್ರಸ್ಟ್ ಅನ್ನು ಪುನರಚಿಸಿ ಸೇವಾ ಕಾರ್ಯಗಳನ್ನು ವಿಸ್ತರಿಸಲಾಗುತ್ತಿದೆಯೆಂದರು.
ವೇದಿಕೆಯಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ನವೀನ್‌ಕುಮಾರ್, ಐತರಾಸನಹಳ್ಳಿ ಗ್ರಾಪಂ ಪಿಡಿಓ ಸತೀಶ್, ಪಶುವೈದ್ಯಾಕಾರಿ ಡಾ.ಮಂಜುನಾಥ್, ಮುಖಂಡರಾದ ಬೆಳ್ಳಾರಪ್ಪ, ಜ್ಯೂಸ್ ನಾರಾಯಣಸ್ವಾಮಿ ಹಾಗೂ ಗ್ರಾಮದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುನಿಸ್ವಾಮಪ್ಪ ನಿರೂಪಿಸಿ, ಗೌತಮಿ ತಂಡದಿಂದ ಪ್ರಾರ್ಥನೆ ನೆರವೇರಿತು. ಯೋಗಿನಾರೇಯಣ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆಯನ್ನು ಅರ್ಚಕ ವೆಂಕಟಸ್ವಾಮಾಚಾರ್ ನೆರವೇರಿಸಿದರು.