ಗ್ರಾಮದ ಸಮಗ್ರ ಅಭಿವೃದ್ದಿಗೆ ಸಹಕರಿಸಲು ಮನವಿ

ಕೋಲಾರ,ಏ.೭: ಗ್ರಾಮದ ಸಮಗ್ರ ಅಭಿವೃದ್ದಿಗೆ ಗ್ರಾಮ ಪಂಚಾಯಿತಿಯಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳೋಣ, ಗ್ರಾಮವನ್ನು ಮಾದರಿಯಾಗಿಸಲು ಎಲ್ಲರೂ ಸಹಕಾರ ನೀಡಿ ಎಂದು ಗ್ರಾ.ಪಂ ಸದಸ್ಯೆ ಎಸ್.ಎಂ.ರೂಪ ಕೋರಿದರು.
ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ವತಿಯಿಂದ ನಾಗಲಾಪುರ ಗ್ರಾಮದಲ್ಲಿ ನಡೆದ ೨೦೨೧-೨೨ನೇ ಸಾಲಿನ ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸುತ್ತಮುತ್ತಲ ಅನೇಕ ಗ್ರಾಮಗಳಲ್ಲಿ ಶುದ್ದ ನೀರಿನ ಘಟಕಗಳಿವೆ, ನಮ್ಮ ಗ್ರಾಮದ ಜನತೆಗೂ ಶುದ್ದ ಕುಡಿಯುವ ನೀರು ಒದಗಿಸುವ ಸಂಕಲ್ಪ ತಮ್ಮದಾಗಿದ್ದು, ಗ್ರಾಮದಲ್ಲಿ ಅತಿ ಶೀಘ್ರ ಶುದ್ದ ನೀರಿನ ಘಟಕ ಸ್ಥಾಪಿಸಲು ಕ್ರಮವಹಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಬರಬಹುದಾದ ಅನುದಾನಗಳ ಸದ್ಬಳಕೆ ಮೂಲಕ ಗ್ರಾಮದ ಸಮಗ್ರ ಅಭಿವೃದ್ದಿಗೆ ಶ್ರನಿಸುವುದಾಗಿ ತಿಳಿಸಿದ ಅವರು, ಗ್ರಾಮದಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ತಿಳಿಸಿದರು.
ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲು ಅವಕಾಶವಿದ್ದು, ಗ್ರಾಮದಲ್ಲಿ ರಸ್ತೆ,ಚರಂಡಿ ನಿರ್ಮಾಣದ ಜತೆಗೆ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಗೂ ಆದ್ಯತೆ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ಕೆ.ವಿಜಯ್, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಾಲಾಜಿ,ಊರಿನ ಮುಖಂಡರಾದ ಸಿದ್ದಲಿಂಗಯ್ಯ, ಗಜೇಂದ್ರ, ಪಾಟೀಲ್, ಚಂದ್ರಪ್ಪ, ಮುನಿಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.