ಗ್ರಾಮದ ದೇವರ ಜಾತ್ರೆಯಂತೆ ಶಿಕ್ಷಣ ಜಾತ್ರೆ ಆಚರಿಸಿ:  ಶಾಸಕ ಬಸವಂತಪ್ಪ ಕಿವಿಮಾತು

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೫; ಶ್ರಮದಿಂದ, ಛಲದಿಂದ ಓದಿದರೆ ನೀವು ಕೂಡ ನಾಡಿನ ಉತ್ತಮ ಪ್ರಜೆಯಾಗಿ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಮಕ್ಕಳಿಗೆ ಕಿವಿಮಾತು ಹೇಳಿದರು. ತಾಲೂಕಿನ ಗಂಗನಕಟ್ಟೆ ಗ್ರಾಮದಲ್ಲಿ  ಶಿಕ್ಷಣ ಇಲಾಖೆ ದಕ್ಷಿಣ ವಲಯ, ಪ್ರೌಢಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ 67 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಯ ಐದು ಹೆಚ್ಚುವರಿ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.ಕಷ್ಟಪಟ್ಟು ಓದಿದ್ದರಿಂದಲೇ ನಿಮ್ಮ ಗ್ರಾಮದ ದಿವಾಕರ್ ಅವರು ವಿಜಯನಗರ ಜಿಲ್ಲಾಧಿಕಾರಿಯಾಗಿದ್ದಾರೆ. ಅವರಂತೆ ನೀವು ಕೂಡ ಶ್ರಮಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಆಗಿ ದಕ್ಷ ಅಧಿಕಾರಿಗಳಾಗಿ ನೀವು ಹುಟ್ಟಿದ ಗ್ರಾಮಕ್ಕೆ, ಜಿಲ್ಲೆಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.ಗ್ರಾಮದಲ್ಲಿ ದೇವರ ಜಾತ್ರೋತ್ಸವ ಆಚರಿಸಿದಂತೆ ಶಿಕ್ಷಣದ ಜಾತ್ರೋತ್ಸವವನ್ನೂ ಮಾಡಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರೆ ಇತರೆ ಮಕ್ಕಳು ಕೂಡ ಅವರಂತೆ ನಾವು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕೆಂಬ ಛಲ ಬರುತ್ತದೆ ಎಂದು ಗ್ರಾಮಸ್ಥರಿಗೆ ಪ್ರೇರಣೆ ನೀಡಿದ ಅವರು, ಈ ನಿಟ್ಟಿನಲ್ಲಿ ಗ್ರಾಮದ ಪ್ರತಿಯೊಬ್ಬ ಮಕ್ಕಳು ಶಿಕ್ಷಣವಂತರಾದರೆ ಗ್ರಾಮ ಸುಭಿಕ್ಷವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದರು.ಬ್ರಿಟಿಷರ ಕಾಲದಲ್ಲಿ ಕಟ್ಟಿದ ಕಟ್ಟಡಗಳು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಆದರೆ ಈಗ ಕಟ್ಟುವ ಕಟ್ಟಡಗಳು ಕೇವಲ 20 ವರ್ಷ ಬಾಳಿಕೆ ಬಂದರೆ ಹೆಚ್ಚು. ಹೀಗಾಗಿ ಅಧಿಕಾರಿಗಳು, ಗುತ್ತಿಗೆದಾರರು ಗುಣಮಟ್ಟ ಕಾಮಗಾರಿಗೆ ಹೆಚ್ಚು ಒತ್ತು ನೀಡಬೇಕು. ಗ್ರಾಮಸ್ಥರು ಕೂಡ ಕಟ್ಟಡ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಪರಿಶೀಲಿಸುತ್ತಿದ್ದರೆ ಗುಣಮಟ್ಟ ಕಾಮಗಾರಿ ನಡೆಸಲು ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಎಸ್ ಡಿಎಂಸಿ ಅಧ್ಯಕ್ಷೆ ಚನ್ನಪ್ಪ, ಸದಸ್ಯ ಮರುಳಸಿದ್ದ ಆಚಾರ್, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಮುಖ್ಯ ಶಿಕ್ಷಕಿ ಅನ್ನಪೂರ್ಣ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ರಾಜೀವ್ ಸೇರಿದಂತೆ ಇನ್ನಿತರರಿದ್ದರು.