ಗ್ರಾಮದ ತುಂಬೆಲ್ಲ ಜೆಜೆಎಂ ಗುಂಡಿ

ಪೂರ್ಣಗೊಳ್ಳದ ಕಾಮಗಾರಿ : ಗಂಜಹಳ್ಳಿ ಗ್ರಾಮಸ್ಥರು ಪರದಾಟ
ಹುಸೇನಪ್ಪ ಗಂಜಳ್ಳಿ
ರಾಯಚೂರು, ಮೇ.೧೭- ಮನೆ ಮನೆಗೆ ನಳ ಸಂಪರ್ಕ ಒದಗಿಸುವ ಉದ್ದೇಶದಿಂದ ತಾಲೂಕಿನ ಯದ್ಲಾಪೂರು ಗ್ರಾಮ ಪಂಚಾಯ್ತಿಗೆ ಒಳಪಡುವ ಗಂಜಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಜಲಜೀವನ ಮಿಷನ್ ಯೋಜನೆ ಕಾಮಗಾರಿಗಾಗಿ ಗುತ್ತೇದಾರರು ತೋಡಿದ ಗುಂಡಿಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಏಳು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮಳೆ ನೀರು, ಚರಂಡಿ ನೀರು ಹರಿದು ಹೋಗಲು ಮಾರ್ಗವಿಲ್ಲದೆ ಮನೆಯ ಮುಂದೆಯೆ ನಿಲ್ಲುತ್ತಿದೆ. ಈಗಾಗಲೇ ಮಕ್ಕಳು ಮುದುಕರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಶಾಲೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಗುಂಡಿಗಳು ತೋಡಿರುವದರಿಂದ ಮಕ್ಕಳು ಗುಂಡಿಯಲ್ಲಿ ಬಿದ್ದಿರುವ ಅನೇಕ ಘಟನೆಗಳು ನಡೆದಿವೆ. ಆದರೆ ಅಧಿಕಾರಿಗಳು ಮಾತ್ರ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ.
೨೦೨೨ ನೇ ನವೆಂಬರ್ ೧೭ಕ್ಕೆ ೧ ಕೋಟಿ ವೆಚ್ಚದ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಭೂಮಿ ಪೂಜೆ ನೆರೆವೇರಿಸಿದ್ದರು.
ಅಂದಿನಿಂದ ಆರಂಭವಾದ ಕಾಮಗಾರಿಗಾಗಿ ಗ್ರಾಮದ ತುಂಬಾ ರಸ್ತೆಗಳನ್ನು ಅಗೆದು ಮನೆಗೆ ನಳ ಜೋಡಿಸುವ ಕೆಲಸಕ್ಕೆ ಮುಂದಾಗಿದ್ದರು. ಆದರೆ ಅಧಿಕಾರಿಗಳು ಜನಪ್ರತಿನಿದಿನಗಳ ನಿರ್ಲಕ್ಷ ತನದಿಂದ ಗ್ರಾಮಸ್ಥರು ತೊಂದರೆ ಸಿಲುಕಿದ್ದಾರೆ. ಮಳೆಯದರೆ ನೀರು ಹರಿದು ಹೋಗಲು ದಾರಿ ಇಲ್ಲದೇ ಮನೆಗಳ ಒಳಕ್ಕೆ ನುಗ್ಗುತ್ತಿದೆ. ಇದರಿಂದ ಮನೆಯ ಗೋಡೆಗಳು ಬಿರುಕು ಬಿಡುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದಲ್ಲಿ ಹಾಕಲಾಗಿರುವ ಪೈಪುಗಳು ಹಾಳಾಗಿವೆ. ಅನೇಕ ಕಡೇ ತುಕ್ಕು ಹಿಡಿದಿವೆ.
ಜೆಜೆಎಂ ವಿಳಂಬ ಧೋರಣೆಯಿಂದ ಗ್ರಾಮದಲ್ಲಿ ಉಂಟಾಗಿರುವ ಸಮಸ್ಯೆ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರು ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.

ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ ಗ್ರಾಮದ ಜನರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಗಳು ನಿರ್ಲಕ್ಷ ಮುಂದುವರಿಯುತ್ತಿದೆ.
-ರಮೇಶ
ಗ್ರಾಮದ ನಿವಾಸಿ

ಗ್ರಾಮದ ಜೆಜೆಎಂ ಗುಂಡಿ ಸಮಸ್ಯೆ ಅದು ನನ್ನ ಜವಾಬ್ದಾರಿ ಅಲ್ಲ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ಕುರಿತು ದೂರು ನೀಡಿ
-ಚನ್ನಮ್ಮ
ಪಿಡಿಒ ಯದ್ಲಾಪೂರು ಪಂಚಾಯತ್